ಕೀರ್ತನೆ 20
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
1 ಯೆಹೋವ ದೇವರು ಇಕ್ಕಟ್ಟಿನಲ್ಲಿ ನಿಮಗೆ ಉತ್ತರವನ್ನು ನೀಡಲಿ;
ಯಾಕೋಬನ ದೇವರ ಹೆಸರು ನಿಮ್ಮನ್ನು ಕಾಪಾಡಲಿ.
2 ದೇವರು ಪರಿಶುದ್ಧ ಸ್ಥಳದೊಳಗಿಂದ ನಿಮಗೆ ಸಹಾಯ ಕಳುಹಿಸಲಿ;
ಅವರು ಚೀಯೋನಿನಿಂದ ನಿಮಗೆ ಆಧಾರ ನೀಡಲಿ.
3 ನಿಮ್ಮ ಯಜ್ಞಾರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿಕೊಂಡು,
ನಿಮ್ಮ ದಹನಬಲಿಗಳನ್ನು ಸ್ವೀಕರಿಸಲಿ.
4 ದೇವರು ನಿಮ್ಮ ಹೃದಯದ ಬಯಕೆಯನ್ನು ನಿಮಗೆ ದಯಪಾಲಿಸಲಿ;
ನಿಮ್ಮ ಎಲ್ಲಾ ಯೋಜನೆಗಳಲ್ಲಿಯೂ ಯಶಸ್ಸನ್ನು ನೀಡಲಿ.
5 ನಾವು ದೇವರ ಜಯದಲ್ಲಿ ಆನಂದ ಘೋಷಮಾಡಿ,
ನಮ್ಮ ದೇವರ ಹೆಸರಿನಲ್ಲಿಯೇ ನಾವು ನಮ್ಮ ಧ್ವಜಗಳನ್ನು ಎತ್ತುವೆವು.
ಯೆಹೋವ ದೇವರು ನಿಮ್ಮ ಬಿನ್ನಹಗಳನ್ನೆಲ್ಲಾ ಪೂರೈಸಲಿ.
6 ಈಗ ನಾನು ಇದನ್ನು ಬಲ್ಲೆನು:
ಯೆಹೋವ ದೇವರು ತಮ್ಮ ಅಭಿಷಿಕ್ತನಿಗೆ ಜಯ ನೀಡುವರು.
ತಮ್ಮ ಜಯದ ಬಲಗೈಯ ಶಕ್ತಿಯಿಂದಲೂ
ತಮ್ಮ ಪರಿಶುದ್ಧ ಪರಲೋಕದಿಂದಲೂ ಅವನಿಗೆ ಉತ್ತರಕೊಡುವರು.
7 ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳಲ್ಲಿಯೂ ಭರವಸೆಯಿಡುತ್ತಾರೆ;
ನಾವಾದರೋ ನಮ್ಮ ಯೆಹೋವ ದೇವರ ಹೆಸರಿನಲ್ಲಿ ಭರವಸೆಯನ್ನಿಡುತ್ತೇವೆ.
8 ಅವರು ಬಗ್ಗಿ ಬೀಳುತ್ತಾರೆ,
ನಾವಾದರೋ ಎದ್ದು ಸ್ಥಿರವಾಗಿ ನಿಲ್ಲುವೆವು.
9 ಯೆಹೋವ ದೇವರೇ, ಅರಸನಿಗೆ ಜಯಕೊಡಿರಿ!
ನಾವು ಕರೆಯುವಾಗ ನಮಗೆ ಉತ್ತರಕೊಡಿರಿ!