ಕೀರ್ತನೆ 47
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಗೀತೆ.
1 ಎಲ್ಲಾ ಜನರೇ, ಕೈ ತಟ್ಟಿರಿ;
ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
2 ಏಕೆಂದರೆ ಮಹೋನ್ನತರಾದ ಯೆಹೋವ ದೇವರು ಭಯಭಕ್ತಿಗೆ ಪಾತ್ರರೂ
ಭೂಮಿಯ ಮೇಲೆಲ್ಲಾ ಮಹಾರಾಜರೂ ಆಗಿದ್ದಾರೆ.
3 ಜನರನ್ನು ನಮ್ಮ ಕೆಳಗೆ ತಂದಿದ್ದಾರೆ.
ಜನಾಂಗಗಳನ್ನು ನಮಗೆ ಅಧೀನಮಾಡಿದ್ದಾರೆ.
4 ಅವರು ಪ್ರೀತಿಸುವ ಯಾಕೋಬಿನ ಘನತೆಯಾಗಿರುವ
ನಮ್ಮ ಬಾಧ್ಯತೆಯನ್ನು ನಮಗಾಗಿ ಆಯ್ದುಕೊಂಡಿದ್ದಾರೆ.
5 ದೇವರು ಜಯಘೋಷದಿಂದ ಉನ್ನತರಾಗಿದ್ದಾರೆ.
ಯೆಹೋವ ದೇವರು ತುತೂರಿಯ ಧ್ವನಿಯೊಡನೆ ಸಾಗಿದ್ದಾರೆ.
6 ದೇವರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ;
ನಮ್ಮ ರಾಜರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ.
7 ಏಕೆಂದರೆ, ದೇವರು ಭೂಮಿಗೆಲ್ಲಾ ಮಹಾರಾಜರು.
ದೇವರನ್ನು ಸ್ತೋತ್ರದ ಕೀರ್ತನೆಯಿಂದ ಕೀರ್ತಿಸಿರಿ.
8 ದೇವರು ಜನಾಂಗಗಳನ್ನು ಆಳುತ್ತಾರೆ.
ದೇವರು ತಮ್ಮ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾರೆ.
9 ರಾಷ್ಟ್ರಗಳ ಅಧಿಪತಿಗಳು
ಅಬ್ರಹಾಮನ ದೇವರ ಜನರಾಗಿ ಕೂಡಿಬಂದಿದ್ದಾರೆ.
ಏಕೆಂದರೆ, ಭೂಮಿಯ ರಾಜರೆಲ್ಲರೂ ದೇವರಿಗೆ ಸೇರಿದವರು.
ದೇವರು ಬಹಳವಾಗಿ ಘನ ಹೊಂದಿದ್ದಾರೆ.