ಕೀರ್ತನೆ 48
ಒಂದು ಗೀತೆ. ಕೋರಹೀಯನ ಪುತ್ರರು ಸಂಯೋಜಿಸಿರುವ ಒಂದು ಕೀರ್ತನೆ.
1 ಯೆಹೋವ ದೇವರು ಮಹೋನ್ನತರೂ ನಮ್ಮ ದೇವರು ತಮ್ಮ ಪರಿಶುದ್ಧ ಪರ್ವತ ಪಟ್ಟಣದಲ್ಲಿ
ಬಹಳವಾಗಿ ಸ್ತುತಿಗೆ ಪಾತ್ರರಾಗಿದ್ದಾರೆ.
2 ಉತ್ತರ ದಿಕ್ಕಿನಲ್ಲಿರುವ
ಮಹಾರಾಜರ ಪಟ್ಟಣವಾದ
ಚೀಯೋನ್ ಪರ್ವತವು ಸುಂದರವಾಗಿ ಚಾಪೋನಿನ ಶಿಖರದಂತೆ
ಇಡೀ ಭೂಮಿಗೆ ಸಂತೋಷಕರವಾದದ್ದಾಗಿದೆ.
3 ದೇವರು ಅದರ ಅರಮನೆಗಳಲ್ಲಿ ವಾಸಿಸುತ್ತಾರೆ.
ದೇವರು ತಾವೇ ಅದರ ಭದ್ರಕೋಟೆಯಾಗಿದ್ದಾರೆ.
4 ಏಕೆಂದರೆ, ಇಗೋ, ಅರಸರು ಕೂಡಿಬಂದರು.
ಅವರು ಒಟ್ಟಾಗಿ ದಾಳಿಮಾಡಲು ಬಂದರು.
5 ಅವರು ಪಟ್ಟಣವನ್ನು ಕಂಡು, ಬೆರಗಾದರು.
ಅವರು ಭಯಪಟ್ಟು ಓಡಿಹೋದರು.
6 ಅಲ್ಲಿ ನಡುಕವವೂ ಹೆರುವವಳ ಹಾಗೆ
ನೋವೂ ಅವರನ್ನು ಹಿಡಿಯಿತು.
7 ಪೂರ್ವದಿಕ್ಕಿನ ಗಾಳಿಯಿಂದ ತಾರ್ಷೀಷ್
ಹಡಗುಗಳನ್ನು ನೀವು ಒಡೆಯುತ್ತೀರಲ್ಲಾ.
8 ನಾವು ಹೇಗೆ ಕೇಳಿದೆವೋ
ಹಾಗೆಯೇ ಕಣ್ಣಾರೆ ಕಂಡೆವು,
ಸೇನಾಧೀಶ್ವರ ಯೆಹೋವ ದೇವರ ಪಟ್ಟಣವಾಗಿರುವ,
ನಮ್ಮ ದೇವರ ಪಟ್ಟಣದಲ್ಲಿ ಇದನ್ನು ಕಂಡೆವು:
ದೇವರು ಪಟ್ಟಣವನ್ನು
ಎಂದೆಂದಿಗೂ ಸ್ಥಿರಪಡಿಸುವರು.
9 ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು
ನಿಮ್ಮ ಮಂದಿರದಲ್ಲಿ ನಾವು ಸ್ಮರಿಸುತ್ತೇವೆ.
10 ದೇವರೇ, ನಿಮ್ಮ ಹೆಸರಿಗೆ ತಕ್ಕಂತೆಯೇ
ನಿಮ್ಮ ಸ್ತೋತ್ರವು ಭೂಮಿಯ ಕಟ್ಟಕಡೆಯವರೆಗೂ ಇದೆ;
ನಿಮ್ಮ ಬಲಗೈ ನೀತಿಯಿಂದ ತುಂಬಿದೆ.
11 ನಿಮ್ಮ ನ್ಯಾಯ ನಿರ್ಣಯಗಳ ನಿಮಿತ್ತ
ಚೀಯೋನ್ ಪರ್ವತವು ಸಂತೋಷಪಡಲಿ;
ಯೆಹೂದ ಪುತ್ರಿಯರು ಉಲ್ಲಾಸಪಡಲಿ.
12 ಚೀಯೋನನ್ನು ಸುತ್ತಿ ಅದರ ಸುತ್ತಲೂ ತಿರುಗಾಡಿ
ಅದರ ಗೋಪುರಗಳನ್ನು ಎಣಿಸಿರಿ.
13 ಮುಂದಿನ ತಲಾಂತರಕ್ಕೆ ತಿಳಿಸುವುದಕ್ಕೋಸ್ಕರ
ಅದರ ಗೋಪುರಗಳನ್ನು
ಕಣ್ಣಿಟ್ಟು ನೋಡಿರಿ,
ಅದರ ಅರಮನೆಗಳನ್ನು ಲಕ್ಷಿಸಿರಿ.
14 ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ;
ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.