12
ಮುಪ್ಪಿನ ಸಮಸ್ಯೆಗಳು
1 ಕಷ್ಟಕಾಲಗಳು ಬರುವುದಕ್ಕಿಂತ ಮೊದಲೇ, ವರ್ಷಗಳು ಮುಗಿದು, “ನನಗೆ ಅವುಗಳಲ್ಲಿ ಸುಖವಿಲ್ಲ” ಎಂದು ಹೇಳುವ ಕಾಲಬರುವುದಕ್ಕಿಂತ ಮೊದಲೇ ಯೌವನಪ್ರಾಯದಲ್ಲಿ ನಿನ್ನ ಸೃಷ್ಟಿಕರ್ತನನ್ನು ಜ್ಞಾಪಿಸಿಕೊ.
2 ನೀನು ಮುದುಕನಾದಾಗ, ಸೂರ್ಯ, ಚಂದ್ರ, ನಕ್ಷತ್ರಗಳ ಬೆಳಕು ನಿನಗೆ ಕತ್ತಲೆಯಂತೆ ಕಾಣುತ್ತದೆ. ಮಳೆಯಾದ ಮೇಲೆಯೂ ಮತ್ತೆಮತ್ತೆ ಮೋಡಗಳಂತೆ ನಿನ್ನ ಜೀವನದಲ್ಲಿ ಕಷ್ಟಗಳು ತುಂಬಿರುತ್ತವೆ.
3 ಆ ಸಮಯದಲ್ಲಿ, ನಿನ್ನ ಬಲಿಷ್ಠವಾದ ತೋಳುಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ; ನಿನ್ನ ಬಲಿಷ್ಠವಾದ ಕಾಲುಗಳು ಬಲಹೀನವಾಗಿ ಬಗ್ಗಿಹೋಗುತ್ತವೆ; ನಿನ್ನ ಹಲ್ಲುಗಳು ಬಿದ್ದುಹೋಗುತ್ತವೆ; ಆಗ ನೀನು ಆಹಾರವನ್ನು ಅಗಿದು ತಿನ್ನಲಾರೆ. ನಿನ್ನ ಕಣ್ಣುಗಳು ಮೊಬ್ಬಾಗುತ್ತವೆ.
4 ನಿನ್ನ ಕಿವಿ ಮಂದವಾಗುತ್ತದೆ. ನೀನು ಮಾರುಕಟ್ಟೆಯ ಶಬ್ದವನ್ನೂ ಕೇಳಲಾರೆ. ಅರೆಯುವ ಕಲ್ಲು ಸಹ ನಿನಗೆ ತುಂಬ ಮೌನವಾಗಿದೆಯೋ ಎಂಬಂತೆ ತೋರುವುದು. ಗಾಯನವೂ ನಿನಗೆ ಕೇಳುವುದಿಲ್ಲ. ನಿನಗೆ ನಿದ್ರೆಬಾರದಿರುವುದರಿಂದ ಕೇವಲ ಒಂದು ಹಕ್ಕಿಯ ಧ್ವನಿಯು ನಿನ್ನನ್ನು ಹೊತ್ತಾರೆಯಲ್ಲಿ ಎಬ್ಬಿಸುವುದು.
5 ನೀನು ಎತ್ತರವಾದ ಸ್ಥಳಗಳ ಬಗ್ಗೆ ಭಯದಿಂದಿರುವೆ; ನಿನ್ನ ಹಾದಿಯಲ್ಲಿರುವ ಪ್ರತಿಯೊಂದು ಚಿಕ್ಕ ವಸ್ತುವಿಗೂ ಹೆದರಿಕೊಂಡು ನಡೆದಾಡುವೆ. ನಿನ್ನ ಕೂದಲು ಬಾದಾಮಿ ಮರದ ಹೂವುಗಳಂತೆ ಬಿಳುಪಾಗುವುದು. ನೀನು ನಡೆಯುವಾಗ ಮಿಡತೆಯಂತೆ ನಿನ್ನನ್ನು ಎಳೆದಾಡಿಕೊಂಡು ನಡೆಯುವೆ; ಮಗುವನ್ನು ಪಡೆಯಲಾರದಷ್ಟು ವಯಸ್ಸಾಗುವುದು. ಆಮೇಲೆ ನೀನು ನಿನ್ನ ಹೊಸ ಮನೆಗೆ (ಸಮಾಧಿಗೆ) ಹೋಗುವೆ. ನಿನ್ನ ಶವಸಂಸ್ಕಾರಕ್ಕೆ ಹೋಗಲು ಜನರು ಬೀದಿಗಳಲ್ಲಿ ತುಂಬಿರುವರು.
ಮರಣ
6 ನಿನ್ನ ಜೀವನ ಮುಖ್ಯವಾದದ್ದು.
ನಿನ್ನ ಜೀವನ ಬೆಳ್ಳಿಬಂಗಾರಗಳಂತೆ ಬೆಲೆಬಾಳುವಂಥದ್ದು.
ಆದರೆ, ಅದು ಬಹುಬೇಗನೆ ತುಂಡಾದ ದಾರದಂತೆಯೂ ಮುರಿದುಹೋದ ಪಾತ್ರೆಯಂತೆಯೂ ಆಗುವುದು.
ನಿನ್ನ ಜೀವನ ಬಾವಿಯಲ್ಲಿ ಒಡೆದುಹೋದ ಬಿಂದಿಗೆಯಂತೆ ನಿಷ್ಟ್ರಯೋಜಕವಾಗುವುದು.
ನಿನ್ನ ಜೀವನವು, ಬಾವಿಯ ಕಟ್ಟೆಯ ಮೇಲೆ ಮುಚ್ಚಿದ್ದ ಚಪ್ಪಡಿಕಲ್ಲು ತಾನೇ ಒಡೆದು ಬಾವಿಯೊಳಗೆ ಬಿದ್ದು ಹೋದಂತೆ ನಿಷ್ಪ್ರಯೋಜಕವಾಗುವುದು.
ಆದ್ದರಿಂದಲೇ ಯೌವನ ಪ್ರಾಯದಲ್ಲಿರುವಾಗಲೇ
ನೀನು ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.
7 ನಿನ್ನ ದೇಹ ಭೂಮಿಯಿಂದ ಬಂದಿದೆ.
ನೀನು ಸತ್ತಾಗ ಅದು ಮತ್ತೆ ಭೂಮಿಯ ಪಾಲಾಗುವುದು.
ಆದರೆ ನಿನ್ನ ಆತ್ಮವು ದೇವರಿಂದ ಬಂದಿದೆ.
ನಿನ್ನ ದೇಹವು ಸತ್ತ ಮೇಲೆ, ನಿನ್ನ ಆತ್ಮವು ಮತ್ತೆ ದೇವರ ಬಳಿಗೆ ಹೋಗುವುದು.
8 ಪ್ರತಿಯೊಂದು ಉಪಯೋಗವಿಲ್ಲದ್ದು! ಪ್ರಸಂಗಿಯು ಹೇಳುವುದೇನೆಂದರೆ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ.
ಅಂತಿಮ ನುಡಿಗಳು
9 ಪ್ರಸಂಗಿಯು ತುಂಬ ಜ್ಞಾನಿಯಾಗಿದ್ದನು. ಪ್ರಸಂಗಿಯು ಅನೇಕ ಜ್ಞಾನೋಪದೇಶಗಳನ್ನು ತುಂಬ ಎಚ್ಚರಿಕೆಯಿಂದ ಅಧ್ಯಯನ ಮಾಡಿ ಕ್ರಮಪಡಿಸಿದನು.
10 ಪ್ರಸಂಗಿಯು ಸರಿಯಾದ ಪದಗಳನ್ನು ಪ್ರಯಾಸದಿಂದ ಕಂಡುಹಿಡಿದು ಬಳಸಿದನು; ಸತ್ಯವೂ ಭರವಸೆಗೆ ಯೋಗ್ಯವೂ ಆದ ಉಪದೇಶಗಳನ್ನು ಬರೆದನು.
11 ಜ್ಞಾನಿಯ ನುಡಿಗಳು ಪ್ರಾಣಿಗಳನ್ನು ಮುನ್ನಡೆಸುವ ಚಾವಟಿಗಳಂತಿವೆ. ಅವನ ಉಪದೇಶಗಳು ಮುರಿಯದ ಮೊಳೆಗಳಂತಿವೆ. ಅವುಗಳೆಲ್ಲ ಒಬ್ಬನೇ ಕುರುಬನಿಂದ (ದೇವರಿಂದ) ಬಂದಿವೆ.
12 ಆದ್ದರಿಂದ ಮಗನೇ, ಆ ಉಪದೇಶಗಳನ್ನು ಅಧ್ಯಯನ ಮಾಡು, ಆದರೆ ಬೇರೆ ಪುಸ್ತಕಗಳ ಬಗ್ಗೆ ಎಚ್ಚರಿಕೆಯಿಂದಿರು. ಜನರು ಯಾವಾಗಲೂ ಪುಸ್ತಕಗಳನ್ನು ಬರೆಯುತ್ತಿರುತ್ತಾರೆ; ಅತಿಯಾದ ಅಧ್ಯಯನವು ನಿನ್ನನ್ನು ತುಂಬ ಆಯಾಸಗೊಳಿಸುತ್ತದೆ.
13-14 ಈ ಪುಸ್ತಕದಲ್ಲಿ ಬರೆಯಲಾಗಿರುವ ಎಲ್ಲಾ ವಿಷಯಗಳಿಂದ ನಾವು ಕಲಿತುಕೊಳ್ಳತಕ್ಕದ್ದೇನು? ಒಬ್ಬನು ಮಾಡಬಹುದಾದ ಅತ್ಯಂತ ಮುಖ್ಯವಾದ ಕಾರ್ಯವೆಂದರೆ, ದೇವರಲ್ಲಿ ಭಯಭಕ್ತಿಯಿಂದಿದ್ದು ಆತನ ಆಜ್ಞೆಗಳಿಗೆ ವಿಧೇಯನಾಗರುವುದೇ. ಯಾಕೆಂದರೆ ಜನರ ಎಲ್ಲಾ ಕಾರ್ಯಗಳೂ ರಹಸ್ಯಗಳೂ ದೇವರಿಗೆ ಗೊತ್ತಿವೆ. ಆತನು ಪ್ರತಿಯೊಂದು ಕಾರ್ಯವನ್ನೂ ತಿಳಿದಿರುವುದರಿಂದ ಪ್ರತಿಯೊಂದಕ್ಕೂ ನ್ಯಾಯತೀರ್ಪು ನೀಡುವನು.