ಯೆಹೆಜ್ಕೇಲ
1
ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು
1-3 ನಾನು ಯಾಜಕನಾಗಿದ್ದೇನೆ. ನಾನು ಬೂಜಿಯ ಮಗನಾದ ಯೆಹೆಜ್ಕೇಲ. ನಾನು ಬಾಬಿಲೋನಿನಲ್ಲಿ ಯೆಹೂದ್ಯರೊಂದಿಗೆ ಸೆರೆಯಲ್ಲಿದ್ದೆ. ನಾನು ಕೆಬಾರ್ ಕಾಲುವೆಯ ಬಳಿಯಲ್ಲಿದ್ದಾಗ ಆಕಾಶ ತೆರೆದಿರುವದನ್ನು ಕಂಡೆನು. ನನಗೆ ದೇವದರ್ಶನವಾಯಿತು. ಇದು ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆ ದಿವಸದಲ್ಲಾಯಿತು. ಒಡೆಯನಾದ ಯೆಹೋಯಾಖೀನನು ಸೆರೆಯಲ್ಲಿದ್ದ ಐದನೆಯ ವರ್ಷದ ನಾಲ್ಕನೆ ತಿಂಗಳಿನ ಐದನೆಯ ದಿನದಲ್ಲಿ ಯೆಹೋವನ ವಾಕ್ಯವು ಯೆಹೆಜ್ಕೇಲನಿಗೆ ಬಂದಿತು. ಆ ಸ್ಥಳದಲ್ಲಿ ಯೆಹೋವನ ಆತ್ಮನಿಂದ ಅವನು ಪರವಶನಾದನು.
ಯೆಹೋವನ ರಥ — ದೇವರ ಸಿಂಹಾಸನ
ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜಬಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು. ಆ ಮೋಡದೊಳಗೆ ಮನುಷ್ಯರನ್ನು ಹೋಲುವ ನಾಲ್ಕು ಜೀವಿಗಳಿದ್ದವು. ಆ ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ ನಾಲ್ಕು ರೆಕ್ಕೆಗಳೂ ಇದ್ದವು. ಅವುಗಳ ಕಾಲುಗಳು ನೆಟ್ಟಗಿದ್ದವು. ಅವುಗಳ ಪಾದಗಳು ಕರುವಿನ ಗೊರಸಿನಂತಿದ್ದವು. ಅವು ಬೆಳಗಿದ ತಾಮ್ರದಂತೆ ಹೊಳೆಯುತ್ತಿದ್ದವು. ಒಂದೊಂದು ಜೀವಿಯ ನಾಲ್ಕು ಪಾಶ್ವರ್ಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ತೋಳುಗಳೂ ಕೈಗಳೂ ಇದ್ದವು. ನಾಲ್ಕು ಜೀವಿಗಳಿಗೆ ಮುಖಗಳೂ ರೆಕ್ಕೆಗಳೂ ಈ ರೀತಿಯಲ್ಲಿದ್ದವು; ಆ ರೆಕ್ಕೆಗಳು ಒಂದಕ್ಕೊಂದು ತಾಕಿದ್ದವು. ಆ ಜೀವಿಗಳು ಚಲಿಸುವಾಗ ಅತ್ತಿತ್ತ ತಿರುಗುತ್ತಿರಲಿಲ್ಲ. ತಮ್ಮ ದೃಷ್ಟಿಯಿದ್ದ ಕಡಗೆ ನೆಟ್ಟಗೆ ಹೋದವು.
10 ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ. 11 ಒಂದೊಂದು ಜೀವಿಯ ಎರಡು ರೆಕ್ಕೆಗಳು ಮತ್ತೊಂದು ಜೀವಿಯ ರೆಕ್ಕೆಗಳನ್ನು ತಾಗುತ್ತಿದ್ದವು ಮತ್ತು ಉಳಿದೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು. 12 ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ. 13 ಆ ಜೀವಿಗಳ ಮಧ್ಯದಲ್ಲಿ ಉರಿಯುವ ಕೆಂಡಗಳಂತೆ ಕಾಣುತ್ತಿದ್ದ ಏನೋ ಇತ್ತು.
ಈ ಬೆಂಕಿಯು ಸಣ್ಣ ದೀವಟಿಗೆಗಳಂತೆ ಜೀವಿಗಳ ಮಧ್ಯೆ ಸಂಚರಿಸುತ್ತಿದ್ದವು. ಆ ಬೆಂಕಿಯು ಪ್ರಕಾಶಮಾನವಾಗಿದ್ದು ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14 ಆ ಮಿಂಚಿನ ವೇಗದಂತೆ ಜೀವಿಗಳು ಅತ್ತಿತ್ತ ಓಡಾಡುತ್ತಿದ್ದವು.
15-16 ಆ ಜೀವಿಗಳನ್ನು ನಾನು ನೋಡುತ್ತಿರುವಾಗ, ನೆಲಕ್ಕೆ ತಾಕಿದ್ದ ನಾಲ್ಕು ಚಕ್ರಗಳನ್ನು ಕಂಡೆನು. ಒಂದೊಂದು ಜೀವಿಯ ಪಕ್ಕದಲ್ಲಿ ಒಂದೊಂದು ಚಕ್ರಗಳಿದ್ದವು. ಆ ಎಲ್ಲಾ ಚಕ್ರಗಳು ಒಂದೇ ಪ್ರಕಾರವಾಗಿ ಕಾಣುತ್ತಿದ್ದವು. ಅವುಗಳು ಹೊಳೆಯುವ ಹಳದಿ ಬಣ್ಣದ ರತ್ನಗಳಿಂದ ಮಾಡಲ್ಪಟ್ಟಂತೆ ತೋರುತ್ತಿದ್ದವು. ಆ ಚಕ್ರದೊಳಗೆ ಇನ್ನೊಂದು ಚಕ್ರವಿದ್ದಂತೆ ತೋರುತ್ತಿತ್ತು. 17 ಆ ಚಕ್ರಗಳು ಹೊರಳುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗೆ ಬೇಕಾದರೂ ತಿರುಗಬಲ್ಲವುಗಳಾಗಿದ್ದವು.ಆದರೆ ಜೀವಿಗಳು ಚಲಿಸುತ್ತಿರುವಾಗ ಅವು ತಿರುಗುತ್ತಿರಲಿಲ್ಲ.
18 ಚಕ್ರಗಳ ಅಂಚು ಎತ್ತರವಾಗಿದ್ದು ಭಯಾನಕವಾಗಿ ಕಾಣುತ್ತಿದ್ದವು. ಆ ನಾಲ್ಕು ಚಕ್ರಗಳ ಅಂಚುಗಳ ತುಂಬ ಕಣ್ಣುಗಳಿದ್ದವು.
19 ಚಕ್ರಗಳು ಜೀವಿಗಳೊಂದಿಗೆ ಯಾವಾಗಲೂ ಚಲಿಸುತ್ತಿದ್ದವು. ಜೀವಿಗಳು ಗಾಳಿಯಲ್ಲಿ ಹಾರಾಡುತ್ತಿದ್ದರೆ, ಚಕ್ರಗಳು ಸಹ ಅವುಗಳ ಜೊತೆಯಲ್ಲಿಯೇ ಚಲಿಸುತ್ತಿದ್ದವು. 20 ದೇವರಾತ್ಮನು ನಡೆಸಿದ ಕಡೆಗೆ ಜೀವಿಗಳು ಹೋದವು. ಚಕ್ರಗಳು ಸಹ ಅವುಗಳೊಂದಿಗೆ ಚಲಿಸಿದವು. ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿತ್ತು. 21 ಹೀಗೆ ಜೀವಿಗಳು ಚಲಿಸಿದಾಗ ಚಕ್ರಗಳು ಚಲಿಸಿದವು. ಜೀವಿಗಳು ನಿಂತಾಗ ಚಕ್ರಗಳೂ ನಿಂತವು. ಜೀವಿಗಳು ಗಾಳಿಯಲ್ಲಿ ಮೇಲಕ್ಕೆ ಹೋದರೆ, ಚಕ್ರಗಳೂ ಅವುಗಳೊಂದಿಗೆ ಮೇಲಕ್ಕೆ ಹೋದವು; ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿ ಇತ್ತು.
22 ಆ ಜೀವಿಗಳ ತಲೆಗಳ ಮೇಲೆ ಆಶ್ಚರ್ಯಕರವಾದ ಒಂದು ಗುಮಟದಂತಿರುವ ವಸ್ತುವು ಹರಡಿಕೊಂಡಿತ್ತು. ಅದು ತಲೆಕೆಳಕಾಗಿ ಇಟ್ಟಿದ್ದ ಬೋಗುಣಿಯಂತಿತ್ತು. ಅದು ಸ್ಪಟಿಕದಂತೆ ಸಬಚ್ಫವಾಗಿತ್ತು. 23 ಈ ಬೋಗುಣಿಯಡಿಯಲ್ಲಿ ಒಂದೊಂದು ಜೀವಿಯು ತನ್ನ ಎರಡು ರೆಕ್ಕೆಗಳನ್ನು ಚಾಚಿಕೊಂಡು ಮತ್ತೊಂದು ಜೀವಿಯನ್ನು ತಾಕುತ್ತಿತ್ತು. ಒಂದೊಂದು ಜೀವಿಯ ಮತ್ತೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು.
24 ಜೀವಿಗಳು ಚಲಿಸಿದಾಗಲೆಲ್ಲಾ ಅವುಗಳ ರೆಕ್ಕೆಗಳ ಗಟ್ಟಿಯಾದ ಶಬ್ದ ನನಗೆ ಕೇಳಿಸಿತು. ಅದು ನೀರು ಭೋರ್ಗರೆಯುವ ಶಬ್ದದಂತಿತ್ತು. ಸರ್ವಶಕ್ತನಾದ ದೇವರ ಶಬ್ದದಂತೆ ಅದು ಗಟ್ಟಿಯಾಗಿತ್ತು. ಅದು ದೊಡ್ಡ ಸೈನ್ಯದ ಅಥವಾ ಜನಸಮೂಹದ ಶಬ್ದದಂತಿತ್ತು. ಜೀವಿಗಳು ಚಲಿಸುವುದನ್ನು ನಿಲ್ಲಿಸಿದಾಗ ಅವುಗಳು ತಮ್ಮ ರೆಕ್ಕೆಗಳನ್ನು ತಮ್ಮ ಪಾಶ್ವರ್ಗಳಲ್ಲಿ ಕೆಳಗಿಳಿಸುತ್ತಿದ್ದವು.
25 ಜೀವಿಗಳು ಚಲಿಸುವದನ್ನು ನಿಲ್ಲಿಸಿ ರೆಕ್ಕೆಗಳನ್ನು ಕೆಳಗಿಳಿಸಿದವು. ಆಗ ಇನ್ನೊಂದು ದೊಡ್ಡ ಶಬ್ದ ಉಂಟಾಯಿತು. ಅವುಗಳ ತಲೆಗಳ ಮೇಲ್ಗಡೆಯ ಬೋಗುಣಿಯ ಮೇಲಿನಿಂದ ಆ ಶಬ್ದವು ಹೊರಟಿತ್ತು. 26 ಆ ಬೋಗುಣಿಯ ಮೇಲೆ ಸಿಂಹಾಸನದಂತಿದ್ದ ವಸ್ತುವು ಇತ್ತು. ಅದು ನೀಲಮಣಿಯಂತೆ ನೀಲಿ ಬಣ್ಣದ್ದಾಗಿತ್ತು. ಆ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದ ಒಬ್ಬನು ಮನುಷ್ಯನಂತೆ ಕಾಣುತ್ತಿದ್ದನು. 27 ನಾನು ಆತನ ಸೊಂಟದ ಮೇಲ್ಭಾಗವನ್ನು ನೋಡಿದಾಗ, ಆತನು ಬೆಂಕಿಯಿಂದ ಸುತ್ತುವರಿದ ಕಾದಲೋಹದಂತೆ ಕಂಡನು. ನಾನು ಆತನ ಸೊಂಟದಿಂದ ಕೆಳಭಾಗವನ್ನು ನೋಡಿದಾಗ ಆತನು ಬೆಂಕಿಯಂತೆ ಕಂಡನು. ಆತನ ಸುತ್ತಲೂ ಪ್ರಕಾಶಮಾನವಾದ ಬೆಳಕಿತ್ತು. 28 ಆತನ ಸುತ್ತಲೂ ಇದ್ದ ಪ್ರಕಾಶವು ಮೇ ಬಿಲ್ಲಿನಂತೆಯೂ ಯೆಹೋವನ ಮಹಿಮೆಯಂತೆಯೂ ಕಾಣುತ್ತಿತ್ತು. ನಾನು ಅದನ್ನು ನೋಡಿದ ಕೂಡಲೇ ನೆಲಕ್ಕೆ ಬಿದ್ದೆನು. ಮುಖವನ್ನು ನೆಲದ ಮೇಲಿಟ್ಟು ಅಡ್ಡಬಿದ್ದೆನು. ಆಗ ನನ್ನೊಂದಿಗೆ ಮಾತನಾಡುತ್ತಿದ್ದ ಸ್ವರವನ್ನು ಕೇಳಿದೆನು.