5
ಯೆಹೋವನಿಗೆ ಪ್ರಾರ್ಥನೆ
ಯೆಹೋವನೇ, ನಮಗೆ ಸಂಭವಿಸಿದ್ದನ್ನು ಜ್ಞಾಪಿಸಿಕೊ.
ನಮಗಾಗಿರುವ ಅವಮಾನವನ್ನು ನೋಡು.
ನಮ್ಮ ದೇಶವು ಬೇರೆ ಜನಾಂಗಗಳವರ ಪಾಲಾಗಿದೆ.
ನಮ್ಮ ಮನೆಗಳು ಪರದೇಶಿಗಳಿಗೆ ಕೊಡಲ್ಪಟ್ಟಿವೆ.
ನಾವು ಅನಾಥರಾಗಿದ್ದೇವೆ. ನಮಗೆ ತಂದೆಯೇ ಇಲ್ಲ.
ನಮ್ಮ ತಾಯಂದಿರು ವಿಧವೆಗಳಂತಾಗಿದ್ದಾರೆ.
ನಾವು ಕುಡಿಯುವ ನೀರನ್ನೂ ನಾವು ಕೊಂಡುಕೊಳ್ಳಬೇಕಾಗಿದೆ.
ನಮ್ಮ ಸೌದೆಗೂ ಸಹ ನಾವು ಹಣ ಕೊಡಬೇಕಾಗಿದೆ.
ಮರಣದವರೆಗೂ ನಾವು ಹಿಂದಟ್ಟಲ್ಪಟ್ಟಿದ್ದೇವೆ.
ನಾವು ಬಳಲಿಹೋಗಿದ್ದೇವೆ; ನಾವು ವಿಶ್ರಾಂತಿಯನ್ನೇ ಪಡೆದಿಲ್ಲ.
ನಾವು ಈಜಿಪ್ಟಿನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡೆವು.
ಸಾಕಷ್ಟು ಆಹಾರಕ್ಕಾಗಿ ನಾವು ಅಸ್ಸೀರಿಯಾದೊಡನೆ ಒಪ್ಪಂದ ಮಾಡಿಕೊಂಡೆವು.
ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಪಾಪ ಮಾಡಿದರು. ಈಗ ಅವರು ಸತ್ತುಹೋಗಿದ್ದಾರೆ.
ಆದರೆ ಅವರ ಪಾಪಗಳ ನಿಮಿತ್ತ ನಾವು ಈಗ ಸಂಕಟಪಡುತ್ತಿದ್ದೇವೆ.
ಗುಲಾಮರು ನಮ್ಮ ಅಧಿಪತಿಗಳಾಗಿದ್ದಾರೆ.
ನಮ್ಮನ್ನು ಯಾರೂ ಅವರಿಂದ ರಕ್ಷಿಸಲಾರರು.
ಆಹಾರಕ್ಕಾಗಿ ನಾವು ನಮ್ಮ ಪ್ರಾಣಗಳನ್ನೇ ಆಪತ್ತಿಗೆ ಗುರಿ ಮಾಡಿಕೊಳ್ಳುತ್ತೇವೆ.
ಊರ ಹೊರಗೆ ಖಡ್ಗಗಳನ್ನು ಹಿಡಿದುಕೊಂಡಿರುವ ಜನರಿದ್ದಾರೆ.
10 ನಮ್ಮ ಚರ್ಮವು ಒಲೆಯಂತೆ ಬಿಸಿಯಾಗಿದೆ.
ಹಸಿವೆಯಿಂದಾಗಿ ಜ್ವರವು ನಮ್ಮನ್ನು ಸುಡುತ್ತಿದೆ.
11 ಚೀಯೋನಿನ ಸ್ತ್ರೀಯರನ್ನು ವೈರಿಗಳು ಅತ್ಯಾಚಾರ ಮಾಡಿದ್ದಾರೆ.
ಯೆಹೂದದ ಪಟ್ಟಣಗಳಲ್ಲಿ ಅವರು ಕನ್ನಿಕೆಯರನ್ನು ಅತ್ಯಾಚಾರ ಮಾಡಿದ್ದಾರೆ.
12 ವೈರಿಗಳು ನಮ್ಮ ರಾಜಕುಮಾರರನ್ನು ಗಲ್ಲಿಗೇರಿಸಿದ್ದಾರೆ.
ಅವರು ನಮ್ಮ ಹಿರಿಯರಿಗೆ ಗೌರವ ಕೊಡಲಿಲ್ಲ.
13 ನಮ್ಮ ಯುವಕರನ್ನು ಬೀಸುವ ಕಲ್ಲುಗಳಿಂದ
ದವಸಧಾನ್ಯಗಳನ್ನು ಬೀಸುವವರನ್ನಾಗಿ ವೈರಿಗಳು ಮಾಡಿದರು.
ನಮ್ಮ ಯುವಕರು
ಶ್ರಮದ ಕೆಲಸದಿಂದ ಮುಗ್ಗರಿಸಿದ್ದಾರೆ.
14 ಪಟ್ಟಣದ ದ್ವಾರಗಳ ಬಳಿಯಿಂದ ಹಿರಿಯರು ಹೊರಟುಹೋಗಿದ್ದಾರೆ.
ಯುವಕರು ಸಂಗೀತ ನುಡಿಸುವುದನ್ನು ನಿಲ್ಲಿಸಿದ್ದಾರೆ.
15 ನಮ್ಮ ಹೃದಯಗಳಲ್ಲಿ ಆನಂದವೇ ಉಳಿದಿಲ್ಲ.
ನಮ್ಮ ನರ್ತನದ ಸ್ಥಾನವನ್ನು ಗೋಳಾಟವು ಆವರಿಸಿಕೊಂಡಿದೆ.
16 ನಮ್ಮ ತಲೆಯಿಂದ ಕಿರೀಟವು ಬಿದ್ದುಹೋಗಿದೆ.
ನಾವು ಪಾಪ ಮಾಡಿದ್ದರಿಂದಲೇ ನಮಗೆ ಕೇಡುಗಳಾಗಿವೆ.
17 ಇವುಗಳ ದೆಸೆಯಿಂದಾಗಿ ನಮ್ಮ ಹೃದಯಗಳು ಎಡಬಿಡದೆ ನೋಯುತ್ತಿವೆ.
ನಮ್ಮ ಕಣ್ಣುಗಳು ಸರಿಯಾಗಿ ಕಾಣದಂತಾಗಿವೆ.
18 ಚೀಯೋನ್ ಪರ್ವತವು ನಿರ್ಜನ ಪ್ರದೇಶವಾಗಿದೆ.
ಚೀಯೋನ್ ಪರ್ವತದ ಸುತ್ತಮುತ್ತಲೆಲ್ಲ ನರಿಗಳು ಓಡಾಡುತ್ತವೆ.
19 ಯೆಹೋವನೇ, ನೀನಾದರೋ ಶಾಶ್ವತವಾಗಿ ಆಳುವೆ.
ನಿನ್ನ ರಾಜಸಿಂಹಾಸನವು ಸದಾಕಾಲವಿರುವುದು.
20 ಯೆಹೋವನೇ, ನೀನು ನಮ್ಮನ್ನು ಶಾಶ್ವತವಾಗಿ ಮರೆತಿರುವುದೇಕೆ?
ನೀನು ನಮ್ಮನ್ನು ದೀರ್ಘಕಾಲದವರೆಗೆ ತೊರೆದುಬಿಟ್ಟಿರುವುದೇಕೆ?
21 ಯೆಹೋವನೇ, ನಮ್ಮನ್ನು ನಿನ್ನ ಬಳಿಗೆ ಮತ್ತೆ ಬರಮಾಡಿಕೋ.
ನಾವು ಸಂತೋಷದಿಂದ ನಿನ್ನ ಬಳಿಗೆ ಬರುತ್ತೇವೆ.
ನಮ್ಮ ಜೀವಿತಗಳನ್ನು ಮೊದಲಿನ ಸ್ಥಿತಿಗೆ ಬರಮಾಡು.
22 ನೀನು ನಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿರುವಿಯಾ?
ನೀನು ನಮ್ಮ ಮೇಲೆ ಬಹಳವಾಗಿ ಕೋಪಗೊಂಡಿರುವೆ.