11
ನಾಯಕರ ವಿರುದ್ಧ ಪ್ರವಾದನೆಗಳು
1 ಆಗ ಆತ್ಮವು ನನ್ನನ್ನು ಯೆಹೋವನಾಲಯದ ಪೂರ್ವದ ಬಾಗಿಲಿಗೆ ಕೊಂಡೊಯ್ಯಿತು. ಬಾಗಿಲಿನ ಪ್ರವೇಶ ಸ್ಥಳದಲ್ಲಿ ನಾನು ಇಪ್ಪತ್ತೈದು ಮಂದಿ ಜನರನ್ನು ನೋಡಿದೆನು. ಅವರಲ್ಲಿ ಅಜ್ಜೂರನ ಮಗನಾದ ಯಾಜನ್ಯನನ್ನು, ಬೆನಾಯನ ಮಗನಾದ ಪೆಲತ್ಯನನ್ನು ನಾನು ನೋಡಿದೆನು. ಅವರಿಬ್ಬರು ಜನರಿಗೆ ನಾಯಕರಾಗಿದ್ದರು.
2 ಆದ ದೇವರು ನನ್ನೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ, “ನರಪುತ್ರನೇ, ಈ ಪಟ್ಟಣದಲ್ಲಿ ದುಷ್ಟಯೋಜನೆಗಳನ್ನು ಮಾಡುವವರೂ ಕೆಡುಕಿನ ಸಲಹೆಗಳನ್ನು ನೀಡುವವರೂ ಇವರೇ.
3 ‘ಮನೆಗಳನ್ನು ಕಟ್ಟುವ ಅಗತ್ಯ ಈಗಿಲ್ಲ. ಪಟ್ಟಣವು ಮಡಕೆಯಂತಿದೆ ಮತ್ತು ನಾವು ಮಾಂಸದಂತಿದ್ದೇವೆ’ ಎಂದು ಸುಳ್ಳು ಹೇಳುತ್ತಿದ್ದಾರೆ.
4 ಆದ್ದರಿಂದ ನೀನು ನನ್ನ ಪರವಾಗಿ ಅವರೊಂದಿಗೆ ಮಾತನಾಡಬೇಕು. ನರಪುತ್ರನೇ, ನೀನು ಹೋಗಿ ಅವರಿಗೆ ದೈವವಾಣಿ ನುಡಿ.”
5 ಆಗ ಯೆಹೋವನ ಆತ್ಮನು ನನ್ನ ಮೇಲೆ ಬಂದನು. ಆತನು ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನರಿಗೆ ತಿಳಿಸು: ಇಸ್ರೇಲ್ ಮನೆತನವೇ, ನೀನು ದೊಡ್ಡದೊಡ್ಡ ವಿಷಯಗಳನ್ನು ಆಲೋಚಿಸುತ್ತೀ. ನೀನು ಏನೂ ಯೋಚಿಸುತ್ತೀ ಎಂದ ನಾನು ಬಲ್ಲೆನು.
6 ನೀನು ಈ ನಗರದಲ್ಲಿ ಅನೇಕ ಜನರನ್ನು ಕೊಲೆ ಮಾಡಿರುತ್ತೀ. ರಸ್ತೆಗಳನ್ನು ಹೆಣಗಳಿಂದ ತುಂಬಿಸಿರುತ್ತೀ.
7 ಈಗ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಆ ಹೆಣಗಳು ಮಾಂಸದಂತಿವೆ. ನಗರವು ಮಡಕೆಯಂತಿದೆ. ಆದರೆ ನಾನು ನಿಮ್ಮನ್ನು ಸುರಕ್ಷಿತವಾದ ಆ ಮಡಕೆಯಿಂದ ತೆಗೆದುಬಿಡುವೆನು.
8 ನೀನು ಖಡ್ಗಕ್ಕೆ ಭಯಪಡುವವನಾದರೂ ನಾನು ನಿನ್ನ ಮೇಲೆ ಖಡ್ಗವನ್ನು ತರುವೆನು. ನಮ್ಮ ಒಡೆಯನಾದ ಯೆಹೋವನು ಈ ಮಾತುಗಳನ್ನು ನುಡಿದಿರುವದರಿಂದ ಇದು ನಡೆಯುವುದು.’ ”
9 ದೇವರು ಮುಂದುವರಿಸುತ್ತಾ, “ಈ ನಗರದೊಳಗಿಂದ ನಿಮ್ಮನ್ನು ಹೊರಡಿಸಿ ನಿಮ್ಮನ್ನು ಪರದೇಶಿಯರಿಗೆ ವಶಪಡಿಸುತ್ತೇನೆ; ಮತ್ತು ನಿಮ್ಮನ್ನು ದಂಡಿಸುತ್ತೇನೆ.
10 ನೀವು ಕತ್ತಿಯಿಂದಲೇ ಸಾಯುವಿರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ದಂಡಿಸುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.
11 ಹೌದು, ಈ ಸ್ಥಳವು ಬೇಯಿಸುವ ಪಾತ್ರೆ ಮತ್ತು ನೀವು ಆ ಪಾತ್ರೆಯಲ್ಲಿ ಬೇಯಿಸಲ್ಪಡುವ ಮಾಂಸವಾಗಿರುತ್ತೀರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ಶಿಕ್ಷಿಸುವೆನು.
12 ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ. ನನ್ನ ಆಜ್ಞೆಗೆ ನೀವು ಅವಿಧೇಯರಾದಿರಿ. ನನ್ನ ಕಟ್ಟಳೆಗಳಿಗೆ ನೀವು ವಿಧೇಯರಾಗಲಿಲ್ಲ. ನಿಮ್ಮ ಸುತ್ತಲೂ ಇರುವ ಜನಾಂಗಗಳಂತೆ ಇರಲು ನೀವು ನಿರ್ಧರಿಸಿರುತ್ತೀರಿ.”
13 ನಾನು ದೇವರ ಪರವಾಗಿ ಮಾತನಾಡುವದನ್ನು ನಿಲ್ಲಿಸಿದ ಕೂಡಲೇ, ಬೆನಾಯನ ಮಗನಾದ ಪೆಲತ್ಯನು ಸತ್ತನು. ನಾನು ನೆಲದ ಮೇಲೆ ಬಗ್ಗಿ, “ನನ್ನ ಒಡೆಯನಾದ ಯೆಹೋವನೇ, ನೀನು ಇಸ್ರೇಲಿನಲ್ಲಿ ಅಳಿದುಳಿದವರನ್ನು ಸಂಪೂರ್ಣವಾಗಿ ನಾಶಮಾಡುವಿಯೋ?” ಎಂದು ಗಟ್ಟಿಯಾಗಿ ಕೂಗಿಕೊಂಡೆನು.
ಜೆರುಸಲೇಮಿನ ಚದರಿಸಲ್ಪಟ್ಟ ಜನರ ಕುರಿತು ಪ್ರವಾದನೆ
14 ಯೆಹೋವನ ಸಂದೇಶ ನನಗೆ ದೊರೆಯಿತು:
15 “ನರಪುತ್ರನೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರು ನಿನ್ನ ಸಹೋದರರ, ನಿನ್ನ ಸ್ವಂತ ಸಂಬಂಧಿಕರ ಮತ್ತು ಇಡೀ ಇಸ್ರೇಲ್ ವಂಶದವರ ಬಗ್ಗೆ ಈಗ ಮಾತಾಡುತ್ತಿದ್ದಾರೆ. ‘ಅವರು, ಯೆಹೋವನಿಂದ ದೂರವಾಗಿದ್ದಾರೆ. ಈ ದೇಶವು ನಮಗೆ ನಮ್ಮ ಸ್ವಂತ ಆಸ್ತಿಯಾಗಿ ಕೊಡಲ್ಪಟ್ಟಿದೆ’ ಎಂದು ಅವರು ಹೇಳುತ್ತಾರೆ.
16 “ಆದ್ದರಿಂದ ಜನರಿಗೆ ಹೀಗೆ ಹೇಳು: ನಮ್ಮ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ‘ನಾನು ನನ್ನ ಜನರನ್ನು ಬಹುದೂರದಲ್ಲಿರುವ ಜನಾಂಗಗಳ ಮಧ್ಯಕ್ಕೆ ಹೋಗುವಂತೆ ಮಾಡಿದ್ದು ನಿಜ. ನಾನು ಅನೇಕ ದೇಶಗಳಲ್ಲಿ ಅವರನ್ನು ಚದರಿಸಿರುತ್ತೇನೆ. ಅವರು ಪರದೇಶಗಳಲ್ಲಿರುವಾಗ ಸ್ವಲ್ಪಕಾಲ ನಾನೇ ಅವರಿಗೆ ದೇವಾಲಯವಾಗಿರುವೆನು.
17 ಆದ್ದರಿಂದ ಹೀಗೆ ಹೇಳು: ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿಮ್ಮನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು; ನೀವು ಚದರಿಸಲ್ಪಟ್ಟಿರುವ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸುವೆನು; ಮತ್ತು ನಾನು ನಿಮಗೆ ಇಸ್ರೇಲ್ ದೇಶವನ್ನು ಕೊಡುವೆನು.
18 ನನ್ನ ಜನರು ಹಿಂದಕ್ಕೆ ಬಂದಾಗ ದೇಶದಲ್ಲಿರುವ ಎಲ್ಲಾ ಹೊಲಸು ವಿಗ್ರಹಗಳನ್ನು ತೆಗೆದುಹಾಕುವರು.
19 ಅವರನ್ನು ಹಿಂದಕ್ಕೆ ಬರಮಾಡಿ ಒಗ್ಗಟ್ಟಿನಲ್ಲಿರುವಂತೆ ಮಾಡುವೆನು. ಅವರಲ್ಲಿ ಹೊಸ ಆತ್ಮವನ್ನು ಇರಿಸುವೆನು. ಅವರಲ್ಲಿರುವ ಕಲ್ಲಿನ ಹೃದಯವನ್ನು ತೆಗೆದು ಮೃದುವಾದ ಹೃದಯವನ್ನಿಡುವೆನು.
20 ಆಗ ಅವರು ನನ್ನ ಆಜ್ಞಾವಿಧಿಗಳಿಗೆ ವಿಧೇಯರಾಗುವರು. ನಾನು ಹೇಳುವದನ್ನು ಅವರು ಮಾಡುವರು. ಅವರು ನಿಜವಾಗಿಯೂ ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.’ ”
ಯೆಹೋವನ ಮಹಿಮೆ ಜೆರುಸಲೇಮ್‌ನ್ನು ಬಿಟ್ಟಿದ್ದು
21 ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಆ ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನ್ನು ಶಿಕ್ಷಿಸಲೇಬೇಕಾಗಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ತಿಳಿಸಿದನು.
22 ಆಗ ಕೆರೂಬಿದೂತರು ತಮ್ಮ ರೆಕ್ಕೆಗಳನ್ನು ಚಾಚಿ ಆಕಾಶದಲ್ಲಿ ಹಾರಿಹೋದರು. ಚಕ್ರಗಳು ಅವುಗಳೊಂದಿಗೆ ಹೋದವು. ಮತ್ತು ಇಸ್ರೇಲಿನ ದೇವರ ಮಹಿಮೆಯು ಅವರ ಮೇಲ್ಗಡೆ ಇತ್ತು.
23 ಯೆಹೋವನ ಮಹಿಮೆಯು ಆಕಾಶಕ್ಕೆ ಎತ್ತಲ್ಪಟ್ಟು ಜೆರುಸಲೇಮಿಗೆ ಪೂರ್ವದಲ್ಲಿರುವ ಬೆಟ್ಟದ ಮೇಲೆ ನಿಂತಿತು.
24 ಆಗ ಆತ್ಮವು ನನ್ನನ್ನು ಆಕಾಶಕ್ಕೆ ಎತ್ತಿ ಬಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆ ಒಯ್ಯಲ್ಪಟ್ಟಿದ್ದ ಜನರ ಮಧ್ಯೆ ನಾನು ಬಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಆ ಎಲ್ಲಾ ವಿಷಯಗಳನ್ನು ಕಂಡೆನು. ಬಳಿಕ, ನಾನು ಕಂಡ ಆ ದರ್ಶನವು ನನ್ನನ್ನು ಬಿಟ್ಟುಹೋಯಿತು.
25 ನನ್ನೊಂದಿಗೆ ಸೆರೆವಾಸದಲ್ಲಿದ್ದ ಜನರಿಗೆ, ಯೆಹೋವನು ನನಗೆ ತೋರಿಸಿದ ಎಲ್ಲಾ ಸಂಗತಿಗಳ ಬಗ್ಗೆ ಹೇಳಿದೆನು.