12
ಯೆಹೆಜ್ಕೇಲನು ಸೆರೆಯಾಳಿನಂತೆ ಜೀವಿಸಿದ್ದು
ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನೀನು ದಂಗೆಕೋರರ ಮಧ್ಯೆ ವಾಸಿಸುತ್ತೀ. ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ; ಅವರಿಗೆ ಕಿವಿಗಳಿದ್ದರೂ ಕೇಳುವದಿಲ್ಲ; ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ಆದ್ದರಿಂದ ನರಪುತ್ರನೇ, ನಿನ್ನ ಚೀಲಗಳನ್ನು ತುಂಬಿಸಿ ಸೆರೆಯಾಳಾಗಿ ಹೋಗುವವನಂತೆ ನಟಿಸು. ನೀನು ಹಗಲಲ್ಲಿ ಹೋಗುವುದನ್ನು ಜನರು ನೋಡಲಿ. ಸೆರೆಯಾಳಿನಂತೆ ಅವರ ಕಣ್ಣೆದುರಿನಲ್ಲೆ ನಿನ್ನ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗು. ಒಂದುವೇಳೆ ಅವರು ತಾವು ದಂಗೆಕೋರರೆಂದು ತಿಳಿದುಕೊಳ್ಳಬಹುದು.
“ಸೆರೆಯಾಳಾಗಿ ಹೋಗುವವನಂತೆ ಹಗಲಲ್ಲಿ ನಿನ್ನ ಚೀಲಗಳನ್ನು ಹೊರಗೆ ತೆಗೆದುಕೊಂಡು ಬಾ. ಸಾಯಂಕಾಲವಾದಾಗ ಅವರ ಕಣ್ಣೆದುರಿನಲ್ಲಿಯೇ ನೀನು ದೂರದೇಶಕ್ಕೆ ಸೆರೆಯವನಾಗಿ ಹೋಗುವವನಂತೆ ನಟನೆ ಮಾಡು. ಜನರು ನಿನ್ನನ್ನು ನೋಡುತ್ತಿರುವಾಗ ಗೋಡೆಯಲ್ಲಿ ರಂಧ್ರ ಮಾಡಿ ಅದರಿಂದ ನುಸುಳಿ ಹೊರಗೆ ಹೋಗು. ರಾತ್ರಿಕಾಲದಲ್ಲಿ ಚೀಲವನ್ನು ಹೆಗಲಿಗೇರಿಸಿ ಹೊರಗೆ ನಡಿ. ನೀನು ನೆಲವನ್ನು ನೋಡಲಾಗದಂತೆ ನಿನ್ನ ಮುಖವನ್ನು ಮುಚ್ಚಿಕೋ. ಇದೆಲ್ಲಾ ಮಾಡುವಾಗ ಜನರು ನಿನ್ನನ್ನು ನೋಡುತ್ತಿರಬೇಕು. ಯಾಕೆಂದರೆ ನಿನ್ನನ್ನು ನಾನು ಇಸ್ರೇಲರಿಗೆ ಒಂದು ನಿದರ್ಶನವಾಗಿ ಉಪಯೋಗಿಸುತ್ತಿದ್ದೇನೆ.”
ಹೀಗೆ ನನಗೆ ಆಜ್ಞಾಪಿಸಿದ ಪ್ರಕಾರ ಮಾಡಿದೆನು. ನಾನು ಸೆರೆಯಾಳಿನಂತೆ ಹಗಲಲ್ಲಿ ಚೀಲಗಳನ್ನು ತಂದು ಹೊರಗಿಟ್ಟೆನು. ಸಾಯಂಕಾಲ ನನ್ನ ಕೈಗಳಿಂದ ಗೋಡೆಯಲ್ಲಿ ರಂಧ್ರ ಮಾಡಿ, ರಾತ್ರಿಕಾಲದಲ್ಲಿ ಆ ಚೀಲಗಳನ್ನು ಹೆಗಲ ಮೇಲೆ ಹೊತ್ತು ಹೊರಟೆನು. ಜನರು ನನ್ನನ್ನು ಗಮನಿಸುತ್ತಿರುವಾಗಲೇ ನಾನೆಲ್ಲಾ ಮಾಡಿದೆನು.
ಮರುದಿನ ಬೆಳಿಗ್ಗೆ ಯೆಹೋವನ ಸಂದೇಶವು ನನಗೆ ಬಂತು. ಆತನು ಹೀಗೆ ಅಂದನು: “ನರಪುತ್ರನೇ, ನೀನು ಏನು ಮಾಡುತ್ತಿರುವೆ ಎಂದು ಇಸ್ರೇಲಿನ ಈ ದಂಗೆಕೋರರು ನಿನ್ನನ್ನು ಕೇಳಲಿಲ್ಲವೇ? 10 ಅವರ ಒಡೆಯನಾದ ಯೆಹೋವನು ಇದನ್ನೆಲ್ಲಾ ಹೇಳಿದನು ಎಂದು ಅವರಿಗೆ ತಿಳಿಸು. ಈ ಸಂದೇಶವು ಜೆರುಸಲೇಮಿನ ನಾಯಕರ ಮತ್ತು ಅಲ್ಲಿ ವಾಸಿಸುವ ಇಸ್ರೇಲ್ ಜನರೆಲ್ಲರ ಕುರಿತಾಗಿದೆ. 11 ‘ನೀನು ಅವರಿಗೆ ಹೀಗೆ ಹೇಳು: ನಾನು ನಿಮಗೆ ಒಂದು ಸೂಚನೆಯಾಗಿದ್ದೇನೆ. ನಾನು ಮಾಡಿದ ಸೂಚಕಕಾರ್ಯ ಖಂಡಿತವಾಗಿ ನಿಮಗೆ ಸಂಭವಿಸುವುದು. ನೀವು ದೂರದೇಶಕ್ಕೆ ಸೆರೆಯಾಳುಗಳಾಗಿ ಹೋಗುವಿರಿ.’ 12 ನಿಮ್ಮ ನಾಯಕನು ಗೋಡೆಯಲ್ಲಿ ರಂಧ್ರ ಮಾಡಿ ರಾತ್ರಿ ಕಾಲದಲ್ಲಿ ಅದರಲ್ಲಿ ನುಸುಳಿ ಪಾರಾಗುವನು. ಜನರು ತನ್ನನ್ನು ಗುರುತಿಸದಂತೆ ತನ್ನ ಮುಖವನ್ನು ಮುಚ್ಚಿಕೊಳ್ಳುವನು. ಅವನು ಯಾವ ಕಡೆಗೆ ಹೋಗುತ್ತಿದ್ದಾನೆಂದು ಅವನ ಕಣ್ಣುಗಳಿಗೆ ಕಾಣಿಸದು. 13 ಅವನು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುವನು. ಆದರೆ, ನಾನು (ಯೆಹೋವನು) ಅವನನ್ನು ಹಿಡಿಯುವೆನು. ಅವನು ನನ್ನ ಬಲೆಯೊಳಗೆ ಬೀಳುವನು. ನಾನು ಅವನನ್ನು ಕಸ್ದೀಯರ ದೇಶವಾದ ಬಾಬಿಲೋನಿಗೆ ತರುವೆನು. ಅವನು ಆ ದೇಶವನ್ನು ನೋಡುವುದಿಲ್ಲ; ಅಲ್ಲದೆ ಅವನು ಅಲ್ಲಿ ಸಾಯುವನು. 14 ಅವನ ಸುತ್ತಲೂ ಇರುವವರನ್ನೆಲ್ಲ ನಾನು ಸುತ್ತಮುತ್ತಲಿನ ದೇಶಗಳಿಗೆ ಓಡಿಸಿಬಿಡುವೆನು. ಅವನ ಕೆಲಸಗಾರರನ್ನು ಮತ್ತು ಅವನ ಸೈನ್ಯವನ್ನು ಗಾಳಿಗೆ ತೂರಿಬಿಡುವೆನು. ಮತ್ತು ಅವರನ್ನು ಖಡ್ಗದೊಡನೆ ಬೆನ್ನಟ್ಟುವೆನು. 15 ನಾನೇ ಯೆಹೋವನೆಂದು ಆಗ ಜನರು ತಿಳಿದುಕೊಳ್ಳುವರು; ಯಾಕೆಂದರೆ ನಾನು ಅವರನ್ನು ಜನಾಂಗಗಳ ಮಧ್ಯದಲ್ಲಿ ಚದರಿಸಿದ್ದೇನೆ ಮತ್ತು ಬೇರೆ ದೇಶಗಳಿಗೆ ಓಡಿಸಿದ್ದೇನೆ.
16 “ಆದರೆ ನಾನು ಅವರಲ್ಲಿ ಕೆಲವರನ್ನು ಯುದ್ಧಗಳಿಂದ, ಬರಗಾಲಗಳಿಂದ ಮತ್ತು ರೋಗಗಳಿಂದ ಉಳಿಸುವೆನು. ಅವರು ತಾವು ಹೋಗುವ ದೇಶಗಳಲ್ಲಿನ ಜನರಿಗೆ ತಮ್ಮ ಅಸಹ್ಯವಾದ ಆಚರಣೆಗಳ ಕುರಿತು ಹೇಳಲಾಗುವಂತೆ ನಾನು ಇದನ್ನು ಮಾಡುತ್ತೇನೆ. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”
ಜನರು ಭಯಭೀತರಾಗಿ ನಡುಗುವರು
17 ಆಗ ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ನೀನು ಭೀತಿಯಲ್ಲಿರುವವನಂತೆ ನಟನೆ ಮಾಡಬೇಕು. ನೀನು ಆಹಾರ ತೆಗೆದುಕೊಳ್ಳುವಾಗ ನಡುಗಬೇಕು. ನೀರು ಕುಡಿಯುವಾಗ ಭಯಪಡಬೇಕು ಮತ್ತು ಚಿಂತಿಸಬೇಕು. 19 ಇದನ್ನು ನೀನು ಸಾಮಾನ್ಯ ಜನರಿಗೆ ತಿಳಿಸಬೇಕು. ನೀನು ಹೀಗೆ ಹೇಳಬೇಕು, ‘ಇನ್ನೂ ಇಸ್ರೇಲ್ ದೇಶದಲ್ಲಿರುವ ಜೆರುಸಲೇಮಿನ ನಿವಾಸಿಗಳ ಬಗ್ಗೆ ನಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಅವರು ಊಟಮಾಡುವಾಗ ಉದೆಬಗದಿಂದಿರುವರು; ಅವರು ಕುಡಿಯುವಾಗ ಭಯದಿಂದಿರುವರು. ಯಾಕೆಂದರೆ ಅವರ ದೇಶದಲ್ಲಿರುವ ಸಮಸ್ತವು ನಾಶವಾಗುತ್ತದೆ, ಯಾಕೆಂದರೆ ಅಲ್ಲಿ ವಾಸಿಸುವವರೆಲ್ಲರೂ ಹಿಂಸಕರಾಗಿದ್ದಾರೆ. 20 ಜನರು ವಾಸವಾಗಿರುವ ಪಟ್ಟಣಗಳು ನಾಶವಾಗುತ್ತವೆ; ಇಡೀ ದೇಶವೇ ನಾಶವಾಗುತ್ತದೆ. ನಾನೇ ಯೆಹೋವನೆಂದು ಆಗ ನಿಮಗೆ ತಿಳಿಯುವುದು.’ ”
ಇಸ್ರೇಲಿಗೆ ಬರುವ ದುರ್ಗತಿ
21 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 22 “ನರಪುತ್ರನೇ,
 
‘ಸಂಕಷ್ಟದದಿನಗಳು ಉರುಳುತ್ತಿವೆ;
ಎಲ್ಲಾ ದರ್ಶನಗಳು ನೆರವೇರುವುದಿಲ್ಲ’
 
ಎಂಬ ಈ ಗಾದೆಯನ್ನು ಇಸ್ರೇಲ್ ದೇಶದಲ್ಲಿರುವ ನೀವೆಲ್ಲರೂ ಹೇಗೆ ಅರ್ಥಮಾಡಿಕೊಳ್ಳುವಿರಿ?
23 “ಆ ಜನರಿಗೆ ಹೀಗೆ ಹೇಳು: ಅವರ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಈ ಗಾದೆಗೆ ಅಂತ್ಯವನ್ನು ಬರಮಾಡುವೆನು. ಇಸ್ರೇಲಿನಲ್ಲಿ ಆ ಗಾದೆಯನ್ನು ಅವರು ಇನ್ನೆಂದಿಗೂ ಬಳಸುವುದಿಲ್ಲ. ಅದರ ಬದಲಾಗಿ ಅವರಿಗೆ ಹೀಗೆ ಹೇಳು:
 
‘ಸಂಕಷ್ಟದ ದಿನಗಳು ಸಮೀಪಿಸಿವೆ;
ಪ್ರತಿಯೊಂದು ದರ್ಶನವೂ ನೆರವೇರುವುದು.’
 
24 “ಇಸ್ರೇಲಿನಲ್ಲಿ ಇನ್ನು ಮೇಲೆ ಸುಳ್ಳುದರ್ಶನಗಳಿರುವುದಿಲ್ಲ; ಮುಖಸ್ತುತಿಯ ಕಣಿಯೂ ಇರುವುದಿಲ್ಲ. 25 ಯಾಕೆಂದರೆ ನಾನೇ ಯೆಹೋವನು. ನನಗೆ ಇಷ್ಟಬಂದದ್ದನ್ನು ನಾನು ಹೇಳುವೆನು ಮತ್ತು ಆ ಸಂಗತಿಯು ನೆರವೇರುವುದು. ಅದಕ್ಕೆ ಹೆಚ್ಚು ಸಮಯಬೇಕಾಗದು. ಆ ಸಂಕಟಗಳು ಬೇಗನೇ ಬರುವವು; ನಿಮ್ಮ ಜೀವಮಾನ ಕಾಲದಲ್ಲಿಯೇ ಬರುವವು. ಓ ದಂಗೆಕೋರರಾದ ಜನರೇ, ನಾನು ಒಂದು ವಿಷಯದಲ್ಲಿ ಏನಾದರೂ ಹೇಳಿದರೆ ಆ ವಿಷಯವು ಸಂಭವಿಸುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.
26 ಆಗ ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 27 “ನರಪುತ್ರನೇ, ನಿನಗೆ ನಾನು ಕೊಟ್ಟ ದರ್ಶನಗಳ ಕುರಿತು ಬಹಳ ಕಾಲದ ನಂತರ ಅದು ನೆರವೇರುವುದು ಎಂದು ಇಸ್ರೇಲರ ಜನರು ನೆನೆಸುತ್ತಿದ್ದಾರೆ. 28 ಆದ್ದರಿಂದ ಅವರಿಗೆ ನೀನು ಈ ವಿಷಯವನ್ನು ತಿಳಿಸು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: ಏನೆಂದರೆ ನಾನು ಇನ್ನು ಹೆಚ್ಚು ತಡಮಾಡುವುದಿಲ್ಲ. ನಾನೊಂದು ವಿಷಯವು ನೆರವೇರುವುದು ಎಂದು ಹೇಳಿದರೆ ಅದು ಖಂಡಿತ ನೆರವೇರುವುದು.’ ” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.