18
ನೀತಿಯ ನ್ಯಾಯತೀರ್ಪು
1 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ,
2 “ಇಸ್ರೇಲ್ ದೇಶದ ಕುರಿತಾದ ಈ ಗಾದೆಯನ್ನು ನೀವೆಲ್ಲರೂ ಮರುನುಡಿಯುವುದೇಕೆ?
‘ಹೆತ್ತವರು ಹುಳಿ ದ್ರಾಕ್ಷಿಹಣ್ಣನ್ನು ತಿಂದಾಗ
ಮಕ್ಕಳ ಬಾಯಿ ಹುಳಿಯಾಗುವುದು.’ ”
3 ಆದರೆ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಜನರು ಇನ್ನು ಮುಂದಕ್ಕೆ ಈ ಗಾದೆಯು ಸತ್ಯವೆಂದು ನೆನಸುವದಿಲ್ಲ.
4 ಎಲ್ಲಾ ಪ್ರಾಣಗಳು ನನ್ನವೇ. ತಂದೆಯ ಪ್ರಾಣವೂ ಮಗನ ಪ್ರಾಣವೂ ನನ್ನವೇ. ಪಾಪಮಾಡುವವನು ಮಾತ್ರ ಸಾಯುವನು.
5 “ಒಬ್ಬ ವ್ಯಕ್ತಿ ನೀತಿವಂತನಾಗಿದ್ದರೆ ಅವನು ಬಾಳುವನು. ಆ ಮನುಷ್ಯನು ಜನರನ್ನು ಸರಿಯಾದ ರೀತಿಯಲ್ಲಿ ನೋಡುವನು.
6 ಆ ನೀತಿವಂತ ಮನುಷ್ಯನು ಬೆಟ್ಟಗಳಿಗೆ ಹೋಗಿ ಅಲ್ಲಿ ಸುಳ್ಳು ದೇವರಿಗೆ ಅರ್ಪಿಸಿದ ಆಹಾರದಲ್ಲಿ ಪಾಲು ತೆಗೆದುಕೊಳ್ಳುವದಿಲ್ಲ. ಇಸ್ರೇಲಿನಲ್ಲಿರುವ ಆ ಹೊಲಸು ವಿಗ್ರಹಗಳಿಗೆ ಅವನು ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. ತನ್ನ ಹೆಂಡತಿಯು ಮುಟ್ಟಾದಾಗ ಆಕೆಯನ್ನು ಕೂಡುವುದಿಲ್ಲ.
7 ಆ ಒಳ್ಳೆಯ ಮನುಷ್ಯನು ಜನರ ಬಲಹೀನತೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ; ಸಾಲ ಮಾಡಿದವನ ಒತ್ತೆಯನ್ನು ಬಿಗಿಹಿಡಿಯುವುದಿಲ್ಲ; ಯಾರ ಸೊತ್ತನ್ನೂ ದರೋಡೆ ಮಾಡುವುದಿಲ್ಲ; ಹಸಿದವನಿಗೆ ಅನ್ನ ಕೊಡುವನು; ಬಟ್ಟೆಯಿಲ್ಲದವನಿಗೆ ಬಟ್ಟೆ ಕೊಡುವನು;
8 ಅವನು ಸಾಲ ಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ಕೆಡುಕುಗಳನ್ನು ಮಾಡುವುದಿಲ್ಲ. ಅವನು ತನ್ನ ವ್ಯವಹಾರಗಳಲ್ಲಿ ಪ್ರತಿಯೊಬ್ಬನೊಂದಿಗೂ ಯಥಾರ್ಥವಾಗಿಯೂ ನ್ಯಾಯವಾಗಿಯೂ ಇರುವನು.
9 ಅವನು ನನ್ನ ನಿಯಮಗಳಿಗನುಸಾರವಾಗಿ ಜೀವಿಸುವನು ಮತ್ತು ನನ್ನ ಕಟ್ಟಳೆಗಳಿಗೆ ನಂಬಿಗಸ್ತಿಕೆಯಿಂದ ವಿಧೇಯನಾಗುವನು. ಅಂಥಾ ಮನುಷ್ಯನು ನೀತಿವಂತನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಬಂದುಕುವನು.
10 “ಆದರೆ ಒಂದುವೇಳೆ ಆ ನೀತಿವಂತನ ಮಗನು ಒಳ್ಳೆಯ ಕಾರ್ಯಗಳನ್ನು ಮಾಡದೆ ದರೋಡೆ ಮಾಡುವವನೂ ಕೊಲೆಮಾಡುವವನೂ ಆಗಿರಬಹುದು.
11 ಅವನ ತಂದೆಯು ಈ ಪಾಪಗಳಿಂದ ದೂರವಿದ್ದಾಗ್ಯೂ, ಮಗನು ಈ ಪಾಪಗಳಲ್ಲಿ ಪ್ರತಿಯೊಂದನ್ನೂ ಮಾಡಿದ್ದಿರಬಹುದು. ಅವನು ಬೆಟ್ಟದ ಮೇಲೆ ಹೋಗಿ ಅಲ್ಲಿ ವಿಗ್ರಹಗಳಿಗರ್ಪಿಸಿದ ನೈವೇದ್ಯದಲ್ಲಿ ಪಾಲು ತೆಗೆದುಕೊಳ್ಳಬಹುದು. ಆ ಕೆಟ್ಟ ಮಗನು ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ನಡೆಸಿದ್ದಿರಬಹುದು.
12 ಬಡ, ನಿಸ್ಸಹಾಯಕರಾದ ಜನರಿಗೆ ಕಿರುಕುಳ ಕೊಟ್ಟಿರಬಹುದು. ಜನರ ನಿಸ್ಸಹಾಯಕತೆಯ ಪ್ರಯೋಜನ ಪಡೆಯುತ್ತಿರಬಹುದು. ಒತ್ತೆಗೆ ತೆಗೆದುಕೊಂಡ ವಸ್ತುವನ್ನು ಹಿಂದಕ್ಕೆ ಕೊಡದೆ ಇದ್ದಿರಬಹುದು. ಆ ಮಗನು ವಿಗ್ರಹಗಳಿಗೆ ಪ್ರಾರ್ಥಿಸಿ ಇನ್ನೂ ಅನೇಕ ಭಯಂಕರ ಕೃತ್ಯಗಳನ್ನೂ ಮಾಡಿದ್ದಿರಬಹುದು.
13 ಆ ಕೆಟ್ಟ ಮಗನಿಂದ ಯಾರಾದರೂ ಸಾಲ ತೆಗೆದುಕೊಂಡಿದ್ದರೆ ಅವನು ಅವರಿಂದ ಬಡ್ಡಿಯನ್ನು ಕಡ್ಡಾಯವಾಗಿ ವಸೂಲು ಮಾಡಿದ್ದಿರಬಹುದು. ಹೀಗಿರುವದರಿಂದ ಆ ಕೆಟ್ಟ ಮಗನು ಹೆಚ್ಚುಕಾಲ ಬಂದುಕುವುದಿಲ್ಲ. ಅವನು ಭಯಂಕರ ಕೃತ್ಯಗಳನ್ನು ಮಾಡಿರುವದರಿಂದ ಕೊಲ್ಲಲ್ಪಡುವನು. ಅವನ ಮರಣಕ್ಕೆ ಅವನೇ ಜವಾಬ್ದಾರನು.
14 “ಇಗೋ, ಆ ಕೆಟ್ಟ ಮಗನಿಗೆ ಒಬ್ಬ ಮಗನಿರಬಹುದು. ತಂದೆ ಮಾಡುವ ದುಷ್ಕೃತ್ಯಗಳನ್ನು ನೋಡಿದ ಅವನು ತಂದೆಯಂತೆ ಜೀವಿಸದಿರಬಹುದು.
15 ಈ ಒಳ್ಳೆಯ ಮಗನು ಬೆಟ್ಟಕ್ಕೆ ಹೋಗಿ ಅಲ್ಲಿ ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ತಿನ್ನುವುದಿಲ್ಲ. ಅವನು ಇಸ್ರೇಲಿನ ಹೊಲಸು ವಿಗ್ರಹಗಳಿಗೆ ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ.
16 ಆ ಒಳ್ಳೆಯ ಮಗನು ಯಾರ ಮೇಲೂ ದಬ್ಬಾಳಿಕೆ ನಡೆಸುವುದಿಲ್ಲ. ಅವನು ಒತ್ತೆಯಿಲ್ಲದೆ ಸಾಲಕೊಡುವನು. ಅವನು ಯಾರನ್ನೂ ದರೋಡೆ ಮಾಡುವುದಿಲ್ಲ. ಅವನು ಹಸಿದವರಿಗೆ ಊಟ ಕೊಡುವನು; ಬಟ್ಟೆಯಿಲ್ಲದವರಿಗೆ ಬಟ್ಟೆಯನ್ನು ಕೊಡುವನು.
17 ಅವನು ಬಡವರಿಗೆ ನೋವು ಮಾಡುವುದಿಲ್ಲ. ಅವನು ಹಣವನ್ನು ಸಾಲಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ನನ್ನ ಕಟ್ಟಳೆಗಳಿಗೆ ವಿಧೇಯನಾಗುವನು. ಮತ್ತು ನನ್ನ ನಿಯಮಗಳನ್ನು ಅನುಸರಿಸುವನು. ಈ ಒಳ್ಳೆಯ ಮಗನು ತಂದೆಯ ದುಷ್ಟತನದ ಕಾರಣಕ್ಕಾಗಿ ಮರಣಶಿಕ್ಷೆಯನ್ನು ಅನುಭವಿಸುವದಿಲ್ಲ. ಆ ಒಳ್ಳೆಯ ಮಗನು ಬಾಳುವನು.
18 ತಂದೆಯು ಜನರನ್ನು ಹೆದರಿಸಿಯಾಗಲಿ ದರೋಡೆ ಮಾಡಿಯಾಗಲಿ ವಸ್ತುಗಳನ್ನು ತೆಗೆದುಕೊಂಡಿರಬಹುದು. ತನ್ನ ಜನರ ಮಧ್ಯದಲ್ಲಿ ಕೆಟ್ಟದಾಗಿರುವುದನ್ನು ಅವನು ಮಾಡಿರಬಹುದು. ಆ ತಂದೆಯು ತನ್ನ ಪಾಪಗಳ ಸಲುವಾಗಿ ಸಾಯುವನು. ಆದರೆ ತಂದೆಯ ಪಾಪಗಳಿಗಾಗಿ ಮಗನು ಶಿಕ್ಷಿಸಲ್ಪಡುವುದಿಲ್ಲ.
19 “ ‘ತಂದೆಯ ಪಾಪಗಳಿಗಿರುವ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳದಿರುವದೇಕೆ?’ ಎಂದು ನೀವು ಕೇಳಬಹುದು. ಮಗನು ನ್ಯಾಯವಾದುದ್ದನ್ನು ಮತ್ತು ಸರಿಯಾದುದ್ದನ್ನು ಮಾಡಿದ್ದಾನೆ. ಅವನು ಎಚ್ಚರಿಕೆಯಿಂದ ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾಗಿದ್ದನು. ಆದ್ದರಿಂದ ಅವನು ಬಾಳುವನು.
20 ಯಾರು ಪಾಪ ಮಾಡುತ್ತಾರೋ ಅವರೇ ಮರಣಶಿಕ್ಷೆ ಹೊಂದುವರು. ತಂದೆಯ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳುವುದಿಲ್ಲ. ಮತ್ತು ಮಗನ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ತಂದೆಯು ಹೊತ್ತುಕೊಳ್ಳುವದಿಲ್ಲ. ಒಬ್ಬ ಒಳ್ಳೆ ಮನುಷ್ಯನ ನೀತಿಯು ಅವನಿಗೇ ಸೇರಿದ್ದು. ಕೆಟ್ಟ ಮನುಷ್ಯನ ದುಷ್ಟತ್ವವೂ ಆ ಕೆಟ್ಟ ಮನುಷ್ಯನಿಗೆ ಸೇರಿದ್ದಾಗಿದೆ.
21 “ಒಂದುವೇಳೆ ದುಷ್ಟನೊಬ್ಬನು ತಾನು ಮಾಡಿದ ಎಲ್ಲಾ ಪಾಪಗಳಿಗೆ ವಿಮುಖನಾದರೆ, ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾದರೆ, ನ್ಯಾಯವಾದುದ್ದನ್ನೂ ಸರಿಯಾದುದ್ದನ್ನೂ ಮಾಡಿದರೆ, ಅವನು ಸಾಯದೆ ಬಂದುಕುವನು.
22 ದೇವರು ಅವನ ಹಿಂದಿನ ಪಾಪಗಳನ್ನು ನೆನಪಿಗೆ ತರುವದಿಲ್ಲ. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ಬಂದುಕುವನು.”
23 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನಗೆ ಪಾಪಿಗಳು ಸಾಯುವದರಲ್ಲಿ ಇಷ್ಟವಿಲ್ಲ. ಅವರು ತಮ್ಮ ಜೀವಿತವನ್ನು ಬದಲಾಯಿಸಿ ಜೀವವನ್ನು ಹೊಂದಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.
24 “ಒಂದುವೇಳೆ ಒಳ್ಳೆಯವನೊಬ್ಬನು ತನ್ನ ಒಳ್ಳೆಯತನವನ್ನು ಬಿಟ್ಟು ಪಾಪ ಮಾಡಬಹುದು; ದುಷ್ಟರು ಮಾಡುವ ಅಸಹ್ಯಕೃತ್ಯಗಳನ್ನೆಲ್ಲ ಮಾಡಬಹುದು. ಅವನು ಹೀಗೆ ಮಾಡುತ್ತಾ ಬಂದುಕಲು ಸಾಧ್ಯವೇ ಇಲ್ಲ! ಅವನು ಅಪನಂಬಿಗಸ್ತನಾದ್ದರಿಂದ ಮತ್ತು ಪಾಪ ಮಾಡಿದ್ದರಿಂದ ದೇವರು ಅವನ ಎಲ್ಲಾ ಒಳ್ಳೆಯ ಕಾರ್ಯಗಳನ್ನೂ ಮರೆತುಬಿಡುವನು. ಅವನು ತನ್ನ ಪಾಪಗಳ ದೆಸೆಯಿಂದ ಸಾಯುವನು.”
25 ದೇವರು ಹೇಳಿದ್ದೇನೆಂದರೆ: “ಒಂದುವೇಳೆ ನೀವು ಹೇಳಬಹುದು: ‘ನನ್ನ ಒಡೆಯನಾದ ದೇವರ ಕ್ರಮವು ದೃಢವಾಗಿಲ್ಲ.’ ಆದರೆ, ಇಸ್ರೇಲಿನ ಜನರೇ, ಕೇಳಿರಿ. ನಿಮ್ಮ ನಡತೆಯೇ ದೃಢವಾಗಿಲ್ಲ.
26 ಒಬ್ಬ ಒಳ್ಳೆಯವನು ಬದಲಾವಣೆ ಹೊಂದಿ ಕೆಟ್ಟಕಾರ್ಯಗಳನ್ನು ಮಾಡಿದರೆ, ಅವನ ದುಷ್ಟತ್ವಕ್ಕಾಗಿ ಅವನು ಸಾಯಲೇಬೇಕು.
27 ಆದರೆ ಒಬ್ಬ ಪಾಪಿ ಬದಲಾವಣೆ ಹೊಂದಿ ನೀತಿವಂತನಾಗಿ ಬಾಳಿದರೆ ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
28 ತಾನು ಎಷ್ಟು ಕೆಟ್ಟವನಾಗಿ ಜೀವಿಸಿದನೆಂದು ತಿಳಿದು ನನ್ನ ಕಡೆಗೆ ತಿರುಗಿ ದುಷ್ಟತನ ಮಾಡುವದನ್ನು ನಿಲ್ಲಿಸಿದರೆ. ಅಂಥವನು ಸಾಯದೆ, ಬಾಳುವನು.”
29 ಆದರೆ ಇಸ್ರೇಲ್ ಜನರು, “ಅದು ಸರಿಯಲ್ಲ. ನನ್ನ ಒಡೆಯನಾದ ಯೆಹೋವನ ಕ್ರಮವು ದೃಢವಲ್ಲ” ಎಂದರು.
ಆಗ ದೇವರು “ನಾನು ದೃಢವಾಗಿದ್ದೇನೆ. ನಿಮ್ಮ ನಡತೆಯೇ ದೃಢವಾಗಿಲ್ಲ.
30 ಇಸ್ರೇಲರೇ, ನಾನು ಪ್ರತಿಯೊಬ್ಬನನ್ನು ಅವನವನ ಕಾರ್ಯಗಳ ಪ್ರಕಾರ ನ್ಯಾಯತೀರಿಸುವೆನು” ಎಂದು ಹೇಳಿದನು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆದ್ದರಿಂದ ನನ್ನ ಬಳಿಗೆ ಬನ್ನಿರಿ, ದುಷ್ಟತನ ಮಾಡುವದನ್ನು ನಿಲ್ಲಿಸಿರಿ, ಪಾಪವು ನಿಮ್ಮ ನಾಶನಕ್ಕೆ ಕಾರಣವಾಗದಂತೆ ಎಚ್ಚರಿಕೆಯಾಗಿರಿ.
31 ನಿಮ್ಮ ದಂಗೆಕೋರತನದ ಮಾರ್ಗಗಳನ್ನೆಲ್ಲ ತೊರೆದುಬಿಟ್ಟು ನಿಮ್ಮ ಹೃದಯವನ್ನೂ ಸಬಭಾವವನ್ನೂ ನೂತನ ಮಾಡಿಕೊಳ್ಳಿರಿ. ಇಸ್ರೇಲ್ ಜನರೇ, ನೀವು ಮರಣವನ್ನು ಬರಮಾಡಿಕೊಳ್ಳುವುದೇಕೆ?
32 ನಿಮ್ಮನ್ನು ಸಾಯಿಸಲು ನನಗೆ ಇಷ್ಟವಿಲ್ಲ. ನೀವು ನನ್ನ ಕಡೆಗೆ ಹಿಂದಿರುಗಿ ಜೀವಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.