32
ಅಧಿಪತಿಗಳು ನ್ಯಾಯನೀತಿಯುಳ್ಳವರಾಗಿರಬೇಕು
1 ನನ್ನ ಮಾತುಗಳನ್ನು ಕೇಳಿರಿ. ರಾಜ್ಯದಲ್ಲಿ ಧರ್ಮವು ನೆಲೆಗೊಳ್ಳುವಂತೆ ರಾಜನು ರಾಜ್ಯವಾಳಬೇಕು. ಅಧಿಕಾರಿಗಳು ನ್ಯಾಯದಿಂದ ಜನರನ್ನು ನಡೆಸಿಕೊಂಡು ಹೋಗಬೇಕು.
2 ಹೀಗಿದ್ದಲ್ಲಿ ರಾಜನು ಮಳೆಯಲ್ಲಿ ಆಶ್ರಯ ಸ್ಥಳವಾಗಿಯೂ ಗಾಳಿಯಲ್ಲಿ ಮರೆಯಂತೆಯೂ ಮರುಭೂಮಿಯಲ್ಲಿ ಒರತೆಯಂತೆಯೂ ಬೆಂಗಾಡಿನಲ್ಲಿ ಬಂಡೆಯ ನೆರಳಿನಂತೆಯೂ ಇರುವನು.
3 ಜನರು ಸಹಾಯಕ್ಕಾಗಿ ರಾಜನ ಕಡೆಗೆ ನೋಡುವರು. ಅವನು ಹೇಳಿದ್ದನ್ನು ಅವರು ಕೇಳುವರು.
4 ಈಗ ಗಲಿಬಿಲಿಯಲ್ಲಿರುವವರು ವಿಷಯವನ್ನು ಸ್ಪಷ್ಟವಾಗಿ ಮತ್ತು ಕೂಡಲೇ ತಿಳಿದುಕೊಳ್ಳುವರು. ಈಗ ಸ್ಪಷ್ಟವಾಗಿ ಮಾತಾಡಲಾರದ ಜನರು ಸ್ಪಷ್ಟವಾಗಿಯೂ, ಸರಾಗವಾಗಿಯೂ ಮಾತಾಡಶಕ್ತರಾಗುವರು.
5 ದುಷ್ಟರನ್ನು ಮಹಾವ್ಯಕ್ತಿಗಳೆಂದು ಕರೆಯುವದಿಲ್ಲ. ನೀಚನನ್ನು ಘನವಂತನೆಂದು ಕರೆಯುವದಿಲ್ಲ.
6 ದುಷ್ಟನು ದುಷ್ಟತೆಯ ಬಗ್ಗೆ ಮಾತನಾಡುವನು. ದುಷ್ಕೃತ್ಯಗಳನ್ನು ಮಾಡಲು ತನ್ನ ಹೃದಯದಲ್ಲಿ ಆಲೋಚಿಸುವನು. ದುಷ್ಟನು ಯೆಹೋವನ ಬಗ್ಗೆ ಕೆಟ್ಟವುಗಳನ್ನು ಹೇಳುತ್ತಾನೆ. ಹಸಿದವರಿಗೆ ಆಹಾರವನ್ನು ತಿನ್ನುವದಕ್ಕಾಗಲಿ ಬಾಯಾರಿದವರಿಗೆ ನೀರನ್ನು ಕುಡಿಯುವದಕ್ಕಾಗಲಿ ಅವನು ಬಿಡುವದಿಲ್ಲ.
7 ದುಷ್ಟನು ದುಷ್ಟತನವನ್ನು ಉಪಕರಣವನ್ನಾಗಿ ಬಳಸಿಕೊಳ್ಳುವನು. ಬಡಜನರಿಂದ ಪ್ರತಿಯೊಂದನ್ನು ತೆಗೆದುಕೊಳ್ಳಲು ಅವನು ಆಲೋಚಿಸುವನು, ಸುಳ್ಳುಗಳನ್ನು ಹೇಳುವನು. ಅವನ ಸುಳ್ಳುಗಳು ಬಡವನಿಗೆ ನ್ಯಾಯದೊರಕದಂತೆ ಮಾಡುತ್ತವೆ.
8 ಆದರೆ ಒಬ್ಬ ಒಳ್ಳೆಯ ನಾಯಕನು ಒಳ್ಳೆಯ ಕಾರ್ಯಗಳನ್ನು ಮಾಡಲು ಆಲೋಚಿಸುವನು. ಅಂಥವನು ಒಳ್ಳೆಯ ನಾಯಕನಾಗಿರುವನು.
ಸಂಕಟದ ದಿವಸಗಳು ಬರುವವು
9 ಹೆಂಗಸರಲ್ಲಿ ಕೆಲವರು ಈಗ ಶಾಂತರಾಗಿದ್ದಾರೆ. ಈಗ ನೀವು ಸುರಕ್ಷಿತರಾಗಿದ್ದೀರಿ ಎಂದು ನಿಮಗೆ ಅನ್ನಿಸುತ್ತದೆ. ಆದರೆ ನೀವು ಸುಮ್ಮನಿದ್ದು ನಾನು ಹೇಳುವ ಮಾತುಗಳನ್ನು ಕೇಳಬೇಕು.
10 ಸ್ತ್ರೀಯರೇ, ನೀವೀಗ ಭದ್ರವಾಗಿದ್ದೀರಿ ಎಂದು ನೀವು ನೆನಸುತ್ತೀರಿ, ಆದರೆ ಒಂದು ವರ್ಷದ ನಂತರ ನಿಮಗೆ ಸಂಕಟವು ಪ್ರಾರಂಭವಾಗುವದು. ಮುಂದಿನ ವರ್ಷ ನೀವು ದ್ರಾಕ್ಷಿಹಣ್ಣುಗಳನ್ನು ಕೂಡಿಸುವದಿಲ್ಲ. ಕೂಡಿಸಲು ದ್ರಾಕ್ಷಿಹಣ್ಣುಗಳೇ ಇರುವದಿಲ್ಲ.
11 ಸ್ತ್ರೀಯರೇ, ನೀವೀಗ ಶಾಂತರಾಗಿದ್ದೀರಿ. ಆದರೆ ನೀವು ಭಯಪಡುವವರಾಗಿರಬೇಕು. ನೀವು ಈಗ ಸುರಕ್ಷಿತರಾಗಿದ್ದೀರಿ, ಆದರೆ ನೀವು ಚಿಂತಿಸುವವರಾಗಿರಬೇಕು. ನಿಮ್ಮ ಒಳ್ಳೆಯ ವಸ್ತ್ರಗಳನ್ನು ತೆಗೆದಿಟ್ಟು ಶೋಕಬಟ್ಟೆಯನ್ನು ಧರಿಸಿರಿ. ಆ ಬಟ್ಟೆಗಳನ್ನು ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳಿರಿ.
12 ಶೋಕವಸ್ತ್ರಗಳನ್ನು ದುಃಖದಿಂದ ತುಂಬಿದ ನಿಮ್ಮ ಎದೆಗಳ ಮೇಲೆ ಹಾಕಿಕೊಳ್ಳಿ. ನಿಮ್ಮ ಹೊಲಗಳು ನಿಷ್ಪ್ರಯೋಜಕವಾಗಿರುವದಕ್ಕಾಗಿ ಅಳಿರಿ. ನಿಮ್ಮ ದ್ರಾಕ್ಷಿತೋಟವು ಒಳ್ಳೆಯ ಫಲ ಕೊಡುತ್ತಿತ್ತು. ಆದರೆ ಈಗ ತೋಟವು ಬರಿದಾಗಿದೆ.
13 ನನ್ನ ಜನರ ದೇಶಕ್ಕಾಗಿ ಕೂಗಿರಿ. ಯಾಕೆಂದರೆ ಅದರಲ್ಲಿ ಕೇವಲ ಹಣಜಿಯೂ ಮುಳ್ಳುಗಿಡಗಳೂ ಬೆಳೆಯುತ್ತವೆ. ಒಂದು ಕಾಲದಲ್ಲಿ ಸಂತೋಷಭರಿತವಾಗಿದ್ದ ಪಟ್ಟಣಕ್ಕಾಗಿಯೂ ಎಲ್ಲಾ ಮನೆಗಳಿಗಾಗಿಯೂ ಅಳಿರಿ.
14 ಜನರು ರಾಜಧಾನಿಯನ್ನು ತೊರೆದುಬಿಡುವರು. ಅರಮನೆ, ಬುರುಜುಗಳೆಲ್ಲವೂ ನಿರ್ಜನವಾಗಿವೆ. ಜನರು ಮನೆಗಳಲ್ಲಿ ವಾಸಿಸದೆ ಗುಹೆಗಳಲ್ಲಿ ವಾಸಮಾಡುವರು. ಕಾಡುಕತ್ತೆಗಳೂ ಕುರಿಗಳೂ ನಗರದಲ್ಲಿ ವಾಸಿಸುವವು. ಪಶುಗಳು ಅಲ್ಲಿ ಹುಲ್ಲು ಮೇಯುವವು.
15-16 ದೇವರು ನಮಗೆ ತನ್ನ ಆತ್ಮವನ್ನು ಸುರಿಸುವತನಕ ಇದು ಮುಂದುವರಿಯುವದು. ಈಗ ಯಾವ ಒಳ್ಳೆಯ ಸಂಗತಿಗಳು ನಡಿಯದೆ ಇರುವದರಿಂದ ದೇಶವು ಮರುಭೂಮಿಯಂತಿದೆ. ಆದರೆ ಮುಂದಿನ ದಿವಸಗಳಲ್ಲಿ ಮರುಭೂಮಿಯು ಕರ್ಮೆಲ್ ಪ್ರಾಂತ್ಯದಂತೆ ಆಗಿ ನ್ಯಾಯಧರ್ಮಗಳು ಅಲ್ಲಿ ನೆಲೆಸುವವು. ಕರ್ಮೆಲ್ ಹಸಿರು ಕಾಡಾಗಿದ್ದು ಶುಭವು ನೆಲೆಸಿರುವುದು.
17 ಆದ್ದರಿಂದ ಅಲ್ಲಿ ಆ ಸಮಾಧಾನ ಮತ್ತು ಭದ್ರತೆ ನಿತ್ಯವೂ ಶಾಶ್ವತವಾಗಿರುವವು.
18 ನನ್ನ ಜನರು ಮನೋಹರವಾಗಿರುವ ಶಾಂತಿಮಯವಾದ ಭೂಮಿಯಲ್ಲಿಯೂ ಸುರಕ್ಷಿತವಾದ ಗುಡಾರಗಳಲ್ಲಿಯೂ ಪ್ರಶಾಂತವಾದ ಮತ್ತು ನಿಶಬ್ದವಾದ ಸ್ಥಳಗಳಲ್ಲಿಯೂ ವಾಸಿಸುವರು.
19 ಇವು ಸಂಭವಿಸುವ ಮೊದಲು ಅರಣ್ಯವು ಆಲಿಕಲ್ಲುಗಳಿಂದ ನಾಶವಾಗಬೇಕು. ಪಟ್ಟಣವು ನೆಲಸಮವಾಗಬೇಕು.
20 ನಿಮ್ಮಲ್ಲಿ ಕೆಲವರು ಪ್ರತಿಯೊಂದು ನೀರಿನ ತೊರೆಗಳ ಬಳಿಯಲ್ಲಿ ಬೀಜ ಬಿತ್ತುವರು. ಅದರ ಸುತ್ತಲೂ ಹೋಗಿ ಯಾವ ಆತಂಕವಿಲ್ಲದೆ ತಿನ್ನಲು ನೀವು ನಿಮ್ಮ ಪಶುಗಳನ್ನು ಬಿಡುವಿರಿ; ಸಂತಸದಿಂದ ಇರುವಿರಿ.