3
ಪೌಳಿಗೋಡೆಯನ್ನು ಕಟ್ಟಿದವರು
1 ಎಲ್ಯಾಷೀಬನು ಮಹಾಯಾಜಕನಾಗಿದ್ದನು. ಅವನೂ ಮತ್ತು ಯಾಜಕರುಗಳಾಗಿದ್ದ ಅವನ ಸಹೋದರರೂ ಕುರಿ ಹೆಬ್ಬಾಗಿಲನ್ನು ಕಟ್ಟಿದರು. ನಂತರ ಪ್ರಾರ್ಥಿಸಿ ಯೆಹೋವನಿಗೆ ಅದನ್ನು ಪ್ರತಿಷ್ಠಿಸಿದರು. ಅವರು ಅದಕ್ಕೆ ಬಾಗಿಲುಗಳನ್ನು ಜೋಡಿಸಿದರು. ಆ ಯಾಜಕರು ನೂರುಗೋಪುರ ಮತ್ತು ಹನನೇಲ್ ಗೋಪುರದವರೆಗೂ ಜೆರುಸಲೇಮಿನ ಗೋಡೆಯನ್ನು ಕಟ್ಟಿದ್ದರು. ಅವರು ಪ್ರಾರ್ಥಿಸಿ ಯೆಹೋವನಿಗೆ ಪ್ರತಿಷ್ಠಿಸಿದರು.
2 ಯಾಜಕರು ಕಟ್ಟಿನಿಲ್ಲಿಸಿದ್ದ ಸ್ಥಳದಿಂದ ಜೆರಿಕೊದವರು ಗೋಡೆ ಕಟ್ಟಿದರು, ಜೆರಿಕೊದವರು ಕಟ್ಟಿ ನಿಲ್ಲಿಸಿದ್ದ ಸ್ಥಳದಿಂದ ಇಮ್ರಿಯ ಮಗನಾದ ಜಕ್ಕೂರನು ಗೋಡೆ ಕಟ್ಟಿದನು.
3 ಹಸ್ಸೆನಾಹನ ಗಂಡುಮಕ್ಕಳು ಮೀನುಬಾಗಿಲನ್ನು ಕಟ್ಟಿ ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದಗಳು, ಅಗುಳಿ, ತಿರುಗಣೆಗಳನ್ನಿಟ್ಟು ಭದ್ರಪಡಿಸಿದರು.
4 ಇವನ ನಂತರ ಊರೀಯನ ಮಗನಾದ ಮೆರೇಮೋತನು ಗೋಡೆಯನ್ನು ಕಟ್ಟಿದನು. (ಊರೀಯನು ಹಕ್ಕೋಚನ ಮಗ.)
ಇದರ ಮುಂದಿನ ಭಾಗವನ್ನು ಬೆರೆಕ್ಯನ ಮಗನಾದ ಮೆಷುಲ್ಲಾಮನು ಕಟ್ಟಿದನು. (ಬೆರೆಕ್ಯನು ಮೆಷೇಜಬೇಲನ ಮಗ.)
ಈ ಗೋಡೆಯ ನಂತರದ ಭಾಗವನ್ನು ಬಾನನ ಮಗನಾದ ಚಾದೋಕನು ಕಟ್ಟಿದನು.
5 ತೆಕೋವದವರು ಅಲ್ಲಿಂದಾಚೆಗೆ ಗೋಡೆ ಕಟ್ಟಿದರು. ಆದರೆ ಅವರ ನಾಯಕರು ತಮ್ಮ ರಾಜ್ಯಪಾಲನಾದ ನೆಹೆಮೀಯನಿಗಾಗಿ ಕೆಲಸಮಾಡಲು ಒಪ್ಪಲಿಲ್ಲ.
6 ಯೋಯಾದ ಮತ್ತು ಮೆಷುಲ್ಲಾಮ್ ಹಳೆಬಾಗಿಲನ್ನು ಜೋಡಿಸಿದರು. ಯೋಯಾದನು ಪಾಸೇಹನ ಮಗ; ಮೆಷುಲ್ಲಾಮನು ಬೆಸೋದ್ಯನ ಮಗ. ಅವರು ತೊಲೆಗಳನ್ನು ಇಟ್ಟರು; ಬಾಗಿಲುಗಳನ್ನು, ಕದಗಳನ್ನು, ಅಗುಳಿಗಳನ್ನು ಜೋಡಿಸಿದರು.
7 ಗಿಬ್ಯೋನ್ ಮತ್ತು ಮಿಚ್ಫದ ಜನರು ಅಲ್ಲಿಂದಾಚೆಗೆ ಗೋಡೆಯನ್ನು ಕಟ್ಟಿದರು. ಗಿಬ್ಯೋನಿನ ಮೆಲೆಟ್ಯ ಎಂಬವನು ಮತ್ತು ಮೇರೋನೋತಿನ ಯಾದೋನ್ ಎಂಬವನು ಈ ಕೆಲಸವನ್ನು ಮಾಡಿದರು. ಗಿಬ್ಯೋನ್ ಮತ್ತು ಮೇರೋನೋತ್ ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರುಗಳ ಆಡಳಿತಕ್ಕೆ ಒಳಪಟ್ಟಿತ್ತು.
8 ಹರ್ಹಯನ ಮಗನಾದ ಉಜ್ಜೀಯೇಲನು ಅಲ್ಲಿಂದಾಚೆಗೆ ಕಟ್ಟಿದನು. ಉಜ್ಜೀಯೇಲನು ಅಕ್ಕಸಾಲಿಗನಾಗಿದ್ದನು; ಹನನ್ಯನು ಸುಗಂಧದ್ರವ್ಯವನ್ನು ತಯಾರುಮಾಡುತ್ತಿದ್ದನು. ಇವರು, “ಅಗಲಗೋಡೆ”ಯವರೆಗೂ ಜೆರುಸಲೇಮ್ ಗೋಡೆಯನ್ನು ಕಟ್ಟಿದರು.
9 ಅರ್ಧ ಜೆರುಸಲೇಮಿನ ರಾಜ್ಯಪಾಲನಾಗಿದ್ದ ಹೂರನ ಮಗನಾದ ರೆಫಾಯನು ಮುಂದಿನ ಭಾಗವನ್ನು ಕಟ್ಟಿ ಮುಗಿಸಿದನು.
10 ಹರೂಮಫನ ಮಗನಾದ ಯೆದಾಯನು ಅಲ್ಲಿಂದಾಚೆಗೆ ಗೋಡೆ ಕಟ್ಟಿದನು. ಅದು ಅವನ ಮನೆಯ ನಂತರವೇ ಇತ್ತು. ಅಲ್ಲಿಂದಾಚೆಗೆ ಹಷಬ್ನೆಯನ ಮಗನಾದ ಹಟ್ಟೂಷನು ಕಟ್ಟಿದನು.
11 ಹಾರೀಮನ ಮಗನಾದ ಮಲ್ಕೀಯನು, ಪಹತ್‌ಮೋವಾಬನ ಮಗನಾದ ಹಷ್ಷೂಬನು ಅಲ್ಲಿಂದಾಚೆಗೆ ಕಟ್ಟಿದರು. ಅವರು ಒಲೆಬುರುಜನ್ನು ಸಹ ಕಟ್ಟಿದರು.
12 ಹಲ್ಲೊಹೇಷನ ಮಗನಾದ ಶಲ್ಲೂಮನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಅವನ ಹೆಣ್ಣುಮಕ್ಕಳು ಅವನಿಗೆ ಸಹಾಯ ಮಾಡಿದರು. ಶಲ್ಲೂಮನು ಜೆರುಸಲೇಮಿನ ಇನ್ನೊಂದು ಭಾಗದ ರಾಜ್ಯಪಾಲನಾಗಿದ್ದನು.
13 ಜಾನೋಹ ಪಟ್ಟಣದಲ್ಲಿ ವಾಸಿಸುವ ಹಾನೂನನೂ ಅವನ ಸಂಗಡಿಗರೂ ಕಣಿವೆ ಬಾಗಿಲನ್ನು ಕಟ್ಟಿ ಅದಕ್ಕೆ ಅಗುಳಿ, ತಿರುಗಣಿ, ಕದಗಳನ್ನಿಟ್ಟು ಭದ್ರಪಡಿಸಿದರು. ಅಲ್ಲದೆ ಒಂದು ಸಾವಿರ ಮೊಳದಷ್ಟು ಉದ್ದದ ಗೋಡೆಯನ್ನು ಕಟ್ಟಿ ತಿಪ್ಪೆಬಾಗಿಲಿನ ತನಕ ಮುಂದುವರಿದರು.
14 ರೇಕಾಬನ ಮಗನಾದ ಮಲ್ಕೀಯನು ತಿಪ್ಪೆಬಾಗಿಲನ್ನು ರಿಪೇರಿಮಾಡಿಸಿದನು. ಇವನು ಬೇತ್ ಹಕ್ಕೆರಿಮಿನ ರಾಜ್ಯಪಾಲಕನಾಗಿದ್ದನು. ಅವನು ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು.
15 ಮಿಚ್ಪ ಜಿಲ್ಲಾಧಿಕಾರಿಯಾದ ಶಲ್ಲೂನನು ಬುಗ್ಗೆಬಾಗಿಲನ್ನು ರಿಪೇರಿಮಾಡಿದನು. ಶಲ್ಲೂನನು ಕೊಲ್ಹೋಜಿಯನ ಮಗ. ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು. ನಂತರ ಗೋಡೆಯನ್ನು ರಾಜನ ತೋಟದ ಸಮೀಪದಲ್ಲಿದ್ದ ಸಿಲೋವಕೊಳದ ತನಕ ಮುಂದುವರಿಸಿ ದಾವೀದನಗರಕ್ಕೆ ಪ್ರವೇಶಿಸುವ ಮೆಟ್ಟಿಲುಗಳ ತನಕ ಗೋಡೆಯನ್ನು ಕಟ್ಟಿದನು.
16 ಅಜ್ಬೂಕನ ಮಗನಾದ ನೆಹೆಮೀಯನು ಗೋಡೆಯ ಮುಂದಿನ ಭಾಗವನ್ನು ಕಟ್ಟಿದನು. ಇವನು ಬೇತ್ಚೂರ್ ಜಿಲ್ಲೆಯ ಅರ್ಧಭಾಗಕ್ಕೆ ಅಧಿಕಾರಿಯಾಗಿದ್ದನು. ದಾವೀದನ ಸಮಾಧಿಯ ತನಕ ಗೋಡೆಯನ್ನು ಮುಂದುವರಿಸಿ ವೀರರ ಮನೆಗಳ ತನಕ ಕಟ್ಟಿದನು.
17 ಮುಂದಿನ ಭಾಗವನ್ನು ಲೇವಿಯರು ಕಟ್ಟಿದರು. ಅವರ ಮುಖ್ಯಸ್ತನು ಬಾನಿಯ ಮಗನಾದ ರೆಹೂಮನು. ಕೆಯೀಲ ಎಂಬ ಅರ್ಧ ಜಿಲ್ಲೆಗೆ ರಾಜ್ಯಪಾಲಕನಾಗಿದ್ದ ಹಷಬ್ಯನು ಇದರ ಮುಂದಿನ ಭಾಗದ ಗೋಡೆಯನ್ನು ಕಟ್ಟಿದನು. ಇವನು ತನ್ನ ಜಿಲ್ಲೆಯಲ್ಲಿ ಮಾತ್ರ ರಿಪೇರಿ ಮಾಡಿದನು.
18 ಅವರ ಸಹೋದರರು ಕೆಯೀಲದ ಇನ್ನೊಂದು ಅರ್ಧಜಿಲ್ಲೆಗೆ ರಾಜ್ಯಪಾಲನಾಗಿದ್ದ ಬಿನೈನ ನಾಯಕತ್ವದಲ್ಲಿ ಮುಂದಿನ ಭಾಗದ ಗೋಡೆಯನ್ನು ರಿಪೇರಿಮಾಡಿದರು. ಬಿನೈಹೇನಾದಾದನ ಮಗ.
19 ಮಿಚ್ಪದ ರಾಜ್ಯಪಾಲನಾದ ಏಜೆರನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಏಜೆರನು ಯೇಷೂವನ ಮಗ. ಇವನು ಆಯುಧ ಕೋಣೆಯಿಂದ ಹಿಡಿದು ಗೋಡೆಯ ಮೂಲೆಯ ತನಕ ರಿಪೇರಿಮಾಡಿದನು.
20 ಚಬ್ಬಾಯನ ಮಗನಾದ ಬಾರೂಕನು ಮುಂದಿನ ಭಾಗವನ್ನು ರಿಪೇರಿಮಾಡಿದನು. ಇವನು ಪ್ರಯಾಸಪಟ್ಟು ಮೂಲೆಯಿಂದ ಹಿಡಿದು ಪ್ರಧಾನ ಯಾಜಕನಾದ ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನ ತನಕ ಗೋಡೆಯನ್ನು ಕಟ್ಟಿದನು.
21 ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನಿಂದ ಆ ಮನೆಯ ಕೊನೆಯತನಕ ಗೋಡೆಯನ್ನು ಕಟ್ಟಿದನು.
22 ಆ ಪ್ರಾಂತ್ಯದಲ್ಲಿ ವಾಸಿಸಿದ್ದ ಯಾಜಕರು ಸೇರಿ ಮುಂದಿನ ಭಾಗವನ್ನು ಕಟ್ಟಿದರು.
23 ಬೆನ್ಯಾಮೀನ್ ಮತ್ತು ಹಷ್ಷೂಬ್ ತಮ್ಮ ಸ್ವಂತ ಮನೆಗಳ ಮುಂದಿದ್ದ ಭಾಗವನ್ನು ಕಟ್ಟಿದರು, ಹಾಗೆಯೇ ಮಾಸೇಯನ ಮಗನಾದ ಅಜರ್ಯನು ತನ್ನ ಮನೆ ಮುಂದಿದ್ದ ಗೋಡೆಯನ್ನು ಕಟ್ಟಿದನು.
24 ಹೇನಾದಾದನ ಮಗನಾದ ಬಿನ್ನೂಯ್ ಅಜರ್ಯನ ಮನೆಯಿಂದ ಹಿಡಿದು ಮೂಲೆಯ ತನಕ ಗೋಡೆಯನ್ನು ಕಟ್ಟಿದನು.
25 ಊಜೈಯ ಮಗನಾದ ಪಾಲಾಲನು ಮೂಲೆಯಿಂದ ಹಿಡಿದು ರಾಜನ ಮೇಲ್ಮನೆಯ ಬುರುಜಿನ ತನಕ ಮುಂದುವರಿಸಿದನು. ಇದು ರಾಜನ ಕಾವಲುಪಡೆಯ ಅಂಗಳದ ಸಮೀಪದಲ್ಲಿತ್ತು. ಪರೋಷನ ಮಗನಾದ ಪೆದಾಯನು ಅಲ್ಲಿಂದಾಚೆಗೆ ಅಂದರೆ ಪಾಲಾಲನು ಕೊನೆಗೊಳಿಸಿದಾಚಿನಿಂದ ಮುಂದುವರಿಸಿದನು.
26 ಓಫೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದ ಆಲಯದ ಸೇವಕರು ಮುಂದಿನ ಭಾಗವನ್ನು “ನೀರು” ಎಂಬ ಬಾಗಿಲಿನ ಪೂರ್ವದ ಕಡೆಯವರೆಗೂ ಅದರ ಬಳಿಯಿದ್ದ ಬುರುಜಿನವರೆಗೂ ರಿಪೇರಿ ಮಾಡಿದರು.
27 ತೆಕೋವದವರು ಉಳಿದ ಆ ಭಾಗವನ್ನು ಅಂದರೆ ದೊಡ್ಡ ಬುರುಜಿನಿಂದ ಹಿಡಿದು ಓಫೇಲ್‌ಗೋಡೆಯ ತನಕ ಮುಂದುವರಿಸಿದರು.
28 ಯಾಜಕರು ಕುದುರೆಬಾಗಿಲಿನ ಮೇಲಿನ ಭಾಗವನ್ನು ಕಟ್ಟಿದರು. ಪ್ರತಿಯೊಬ್ಬ ಯಾಜಕನು ತನ್ನ ಮನೆ ಮುಂದಿದ್ದ ಭಾಗವನ್ನು ರಿಪೇರಿಮಾಡಿದನು.
29 ಇಮೇರನ ಮಗನಾದ ಚಾದೋಕನು ತನ್ನ ಮನೆಯ ಮುಂದಿದ್ದ ಗೋಡೆಯ ಭಾಗವನ್ನು ರಿಪೇರಿ ಮಾಡಿದನು. ಪೂರ್ವ ಬಾಗಿಲಿನ ದ್ವಾರಪಾಲಕನಾಗಿರು ಶೆಕನ್ಯನ ಮಗನಾದ ಶೆಮಾಯನು ಮುಂದಿನ ಭಾಗವನ್ನು ರಿಪೇರಿ ಮಾಡಿದನು.
30 ಶೆಲೆಮ್ಯನ ಮಗನಾದ ಹನನ್ಯನೂ ಮತ್ತು ಚಾಲಾಫನ ಆರನೆಯ ಮಗನಾದ ಹಾನೂನನೂ ಉಳಿದ ಭಾಗವನ್ನು ಮುಗಿಸಿದರು.
ಬೆರೆಕ್ಯನ ಮಗನಾದ ಮೆಷುಲ್ಲಾಮ್ ತನ್ನ ಮನೆಯ ಮುಂದಿದ್ದ ಭಾಗವನ್ನು ಕಟ್ಟಿದನು.
31 ವರ್ತಕರ ಮತ್ತು ಆಲಯದ ಸೇವಕರ ಮನೆಗಳ ತನಕದ ಭಾಗವನ್ನು ಮಲ್ಕೀಯನು ರಿಪೇರಿ ಮಾಡಿದನು. ಇದು, “ತನಿಕೆ” ಎಂಬ ಬಾಗಿಲಿನ ಎದುರಿನಲ್ಲಿತ್ತು. ಮೂಲೆಗೋಡೆಯ ಮೇಲಿರುವ ಕೋಣಿಯ ತನಕದ ಭಾಗವನ್ನು ಅಕ್ಕಸಾಲಿಗನಾದ ಮಲ್ಕೀಯನು ರಿಪೇರಿ ಮಾಡಿದನು.
32 ಅಕ್ಕಸಾಲಿಗರು ಮತ್ತು ವರ್ತಕರು ಸೇರಿ ಗೋಡೆ ಮೇಲಿರುವ ಕೋಣಿಯಿಂದ ಹಿಡಿದು, “ಕುರಿ” ಎಂಬ ಬಾಗಿಲಿನ ತನಕದ ಗೋಡೆಯನ್ನು ಕಟ್ಟಿದರು.