4
ಸನ್ಬಲ್ಲಟ್ ಮತ್ತು ಟೋಬೀಯ
1 ನಾವು ಜೆರುಸಲೇಮಿನ ಗೋಡೆ ಕಟ್ಟುತ್ತಿದ್ದೇವೆ ಎಂಬುದನ್ನು ಕೇಳಿದ ಸನ್ಬಲ್ಲಟನು ಹೊಟ್ಟೆಕಿಚ್ಚಿನಿಂದ ಕೋಪಗೊಂಡನು. ಅವನು ಯೆಹೂದ್ಯರನ್ನು ಹಾಸ್ಯ ಮಾಡಿದನು.
2 ಸಮಾರ್ಯದಲ್ಲಿರುವ ಅವನ ಸ್ನೇಹಿತರೊಡನೆ ಮತ್ತು ಸಮಾರ್ಯದ ಸೈನ್ಯದವರೊಡನೆ ಮಾತನಾಡಿ, “ಈ ಬಲಹೀನ ಯೆಹೂದ್ಯರು ಮಾಡುತ್ತಿರುವುದೇನು? ನಾವು ಇವರನ್ನು ಹೀಗೇಯೇ ಬಿಟ್ಟುಬಿಡುತ್ತೇವೆಂದು ತಿಳಿದುಕೊಂಡಿದ್ದಾರೆಯೇ? ತಾವು ಯಜ್ಞಗಳನ್ನು ಅರ್ಪಿಸುವುದಾಗಿ ತಿಳಿದುಕೊಂಡಿರುವರೇ? ಒಂದೇ ದಿನದಲ್ಲಿ ಕಟ್ಟಿಮುಗಿಸುವುದಾಗಿ ಅವರು ತಿಳಿದುಕೊಂಡಿರಬಹುದು. ಆ ತಿಪ್ಪೆಗುಂಡಿಯೊಳಗಿನ ಕಲ್ಲುಗಳ ರಾಶಿಗೆ ಜೀವಕೊಡಲು ಅವರಿಗೆ ಸಾಧ್ಯವಿಲ್ಲ. ಅವು ಕೇವಲ ಬೂದಿ ಮತ್ತು ಹೊಲಸುಗಳ ಗುಡ್ಡೆಗಳಾಗಿವೆ!” ಎಂದು ಹೇಳಿದನು.
3 ಅವನ ಜೊತೆಯಲ್ಲಿದ್ದ ಅಮ್ಮೋನಿಯನಾದ ಟೋಬೀಯನು, “ಈ ಯೆಹೂದ್ಯರು ಕಟ್ಟುತ್ತಿರುವುದೇನು? ಆ ಗೋಡೆಯ ಮೇಲೆ ಒಂದು ನರಿ ಹಾರಿದರೂ ಗೋಡೆಯು ಕುಸಿದುಬೀಳುವುದು” ಎಂದು ವ್ಯಂಗ್ಯವಾಗಿ ಹೇಳಿದನು.
4 ನೆಹೆಮೀಯನು ಯೆಹೋವನಿಗೆ ಪ್ರಾರ್ಥಿಸುತ್ತಾ, “ನಮ್ಮ ದೇವರೇ, ನಮ್ಮ ಪ್ರಾರ್ಥನೆಗೆ ಕಿವಿಗೊಡು. ಆ ಮನಷ್ಯರು ನಮ್ಮನ್ನು ದ್ವೇಷಿಸುತ್ತಾರೆ. ಸನ್ಬಲ್ಲಟನು ಮತ್ತು ಟೋಬೀಯನು ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಆ ಕೇಡುಗಳು ಅವರಿಗೇ ಸಂಭವಿಸಲಿ. ಅವರು ನಾಚಿಕೆಯಿಂದ ತಲೆತಗ್ಗಿಸಲಿ; ಸೆರೆಹಿಡಿಯಲ್ಪಟ್ಟವರಂತೆ ಅವಮಾನ ಹೊಂದಲಿ.
5 ಅವರು ನಿನ್ನ ದೃಷ್ಟಿಯಲ್ಲಿ ಮಾಡಿದ ಪಾಪಗಳನ್ನು ಮನ್ನಿಸಬೇಡ. ಅವರು ಗೋಡೆಯನ್ನು ಕಟ್ಟುವ ನಿನ್ನ ದಾಸರನ್ನು ನಿಂದಿಸಿ ಅವರನ್ನು ನಿರುತ್ಸಾಹಗೊಳಿಸಿದ್ದಾರೆ.”
6 ಜೆರುಸಲೇಮಿನ ಗೋಡೆಯನ್ನು ನಾವು ಕಟ್ಟಿ ಮುಗಿಸಿದೆವು. ಪಟ್ಟಣದ ಸುತ್ತಲೂ ಪೌಳಿಗೋಡೆಯನ್ನು ಕಟ್ಟಿದೆವು. ಆದರೆ ಅದರ ಎತ್ತರ ಇರಬೇಕಾದಷ್ಟು ಇರದೆ ಅರ್ಧದ ತನಕ ಇದ್ದವು. ನಮ್ಮ ಜನರು ತಮ್ಮ ಹೃದಯ ಪೂರ್ವಕವಾಗಿ ಕೆಲಸ ಮಾಡಿದ್ದುದರಿಂದ ನಮಗೆ ಅಷ್ಟಾದರೂ ಮಾಡುವುದಕ್ಕೆ ಆಯಿತು.
7 ಸನ್ಬಲ್ಲಟನು, ಟೋಬೀಯನು, ಅರಬಿಯರು, ಅಮ್ಮೋನಿಯರು ಮತ್ತು ಅಷ್ಡೋದಿನವರು ತುಂಬಾ ಕೋಪಗೊಂಡಿದ್ದರು. ಯಾಕೆಂದರೆ ಜೆರುಸಲೇಮಿನ ಗೋಡೆಯ ಕೆಲಸ ಮುಂದುವರಿಯುತ್ತಿದೆಯೆಂದೂ ಮತ್ತು ಗೋಡೆಗಳ ಕಿಂಡಿಗಳನ್ನು ರಿಪೇರಿ ಮಾಡಲಾಗುತ್ತಿದೆಯೆಂದೂ ಅವರು ಕೇಳಿದ್ದರು.
8 ಅವರೆಲ್ಲಾ ಸೇರಿ ಜೆರುಸಲೇಮಿಗೆ ವಿರುದ್ಧವಾಗಿ ಗಲಭೆ ಎಬ್ಬಿಸುವ ಹಂಚಿಕೆಯನ್ನು ಹೂಡಿದರು; ಯುದ್ಧ ಮಾಡುವ ಯೋಚನೆ ಮಾಡಿದರು.
9 ನಾವು ದೇವರಿಗೆ ಪ್ರಾರ್ಥಿಸಿದೆವು ಮತ್ತು ನಮ್ಮ ಮೇಲೆ ಬೀಳಲು ಬರುವ ಶತ್ರುಗಳಿಗೆ ನಾವು ತಯಾರಿರುವಂತೆ ಹಗಲು ರಾತ್ರಿ ಪಹರೆ ಮಾಡಲು ಗೋಡೆಯ ಮೇಲೆ ಕಾವಲುಗಾರರನ್ನು ನೇಮಿಸಿದೆವು.
10 ಆ ಸಮಯದಲ್ಲಿ ಯೆಹೂದದ ಜನರು, “ಕೆಲಸಗಾರರು ಆಯಾಸಗೊಳ್ಳುತ್ತಿದ್ದಾರೆ; ದಾರಿಯಲ್ಲೆಲ್ಲಾ ತುಂಬಾ ಧೂಳು ಮತ್ತು ಕಸ ಇರುವುದರಿಂದ ನಾವು ಗೋಡೆಕಟ್ಟಡ ಕೆಲಸವನ್ನು ಮುಂದುವರಿಸಲು ಸಾಧ್ಯವಿಲ್ಲ.
11 ಅಲ್ಲದೆ ನಮ್ಮ ವೈರಿಗಳು, ‘ನಾವು ಅವರ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡುವುದರಿಂದ ನಾವು ಅವರ ಮಧ್ಯದಲ್ಲಿರುವ ತನಕ ಅವರಿಗೆ ಗೊತ್ತಾಗುವುದೂ ಇಲ್ಲ ಕಾಣುವುದೂ ಇಲ್ಲ. ನಾವು ಅವರನ್ನು ಕೊಂದಾಗ ಕೆಲಸ ತಾನಾಗಿಯೇ ನಿಂತುಹೋಗುವುದು’ ಎಂದು ಹೇಳುತ್ತಿದ್ದಾರೆ” ಎಂದರು.
12 ಅನ್ಯಜನರ ಮಧ್ಯೆ ವಾಸಿಸುವ ಯೆಹೂದ್ಯರು ನಮ್ಮ ಬಳಿಗೆ ಬಂದು ಹತ್ತು ಬಾರಿ ನಮಗೆ ತಿಳಿಸಿದರು. “ವೈರಿಗಳು ನಮ್ಮ ಸುತ್ತಮುತ್ತಲೂ ಇದ್ದಾರೆ. ನಾವು ಎತ್ತ ತಿರುಗಿದರೂ ಅಲ್ಲಿ ಅವರಿದ್ದಾರೆ” ಎಂದರು.
13 ಆದ್ದರಿಂದ ನಮ್ಮ ಜನರಲ್ಲಿ ಕೆಲವರನ್ನು ಕುಟಂಬ ಸಮೇತವಾಗಿ ಖಡ್ಗ, ಬರ್ಜಿ ಮತ್ತು ಬಿಲ್ಲುಗಳೊಡನೆ ಗೋಡೆಯ ಉದ್ದಕ್ಕೂ ಇದ್ದ ತಗ್ಗಾದ ಸ್ಥಳಗಳಲ್ಲಿಯೂ ಗೋಡೆಗಳಲ್ಲಿದ್ದ ಕಿಂಡಿಗಳ ಬಳಿಯಲ್ಲಿಯೂ ಇರಿಸಿದೆನು.
14 ನಮಗೆದುರಾಗಿ ಬಂದಿದ್ದ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅವಲೋಕಿಸಿ ನಮ್ಮ ಜನರೊಂದಿಗೆ ಕುಟುಂಬ ಕುಟುಂಬವಾಗಿ, ಅಧಿಕಾರಿಗಳಿಗೆ ಮತ್ತು ಉಳಿದ ಜನರಿಗೆ ಹೀಗೆ ಹೇಳಿದೆನು: “ನಮ್ಮ ವೈರಿಗಳ ಬಗ್ಗೆ ನೀವು ಏನೂ ಹೆದರಬೇಡಿರಿ. ನಮ್ಮ ದೇವರನ್ನು ನೆನಪುಮಾಡಿರಿ. ಯೆಹೋವನು ಬಲಶಾಲಿಯೂ ಸರ್ವಶಕ್ತನೂ ಆಗಿದ್ದಾನೆ. ನೀವು ನಿಮ್ಮ ಸಹೋದರರಿಗಾಗಿ, ನಿಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ನಿಮ್ಮನಿಮ್ಮ ಹೆಂಡತಿಯರಿಗಾಗಿ ಮತ್ತು ಮನೆಗಳಿಗಾಗಿ ಹೋರಾಡಿರಿ.”
15 ಅವರ ಕುತಂತ್ರವು ನಮಗೆ ಗೊತ್ತಾಯಿತೆಂದು ವೈರಿಗಳಿಗೆ ತಿಳಿದಾಗ ದೇವರೇ ಅವರ ಯೋಜನೆಯನ್ನು ನಿಷ್ಫಲಮಾಡಿದನೆಂದು ಅವರು ತಿಳಿದರು. ಮತ್ತೆ ನಾವೆಲ್ಲಾ ಕಟ್ಟುವ ಕೆಲಸಕ್ಕೆ ಕೈಹಾಕಿದೆವು. ಅವರವರ ಭಾಗಕ್ಕೆ ಜನರು ತೆರಳಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು.
16 ಆ ದಿವಸದಿಂದ ನನ್ನ ಜನರು ಅರ್ಧಭಾಗ ಗೋಡೆಯ ಕೆಲಸದಲ್ಲಿ ನಿರತರಾದರು; ಉಳಿದ ಅರ್ಧ ಜನರು ಭರ್ಜಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಕಾವಲಾಗಿದ್ದರು; ಗೋಡೆಯನ್ನು ಕಟ್ಟುತ್ತಿದ್ದ ಯೆಹೂದದ ಜನರ ಹಿಂಭಾಗದಲ್ಲಿ ಸೈನ್ಯಾಧಿಕಾರಿಗಳು ನಿಂತುಕೊಂಡಿದ್ದರು.
17 ಗೋಡೆ ಕಟ್ಟುವವರೂ ಅವರ ಸಹಾಯಕರೂ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಕೆಲಸ ಮಾಡುತ್ತಿದ್ದರು.
18 ಕೆಲಸಗಾರರು ತಮ್ಮ ಖಡ್ಗಗಳನ್ನು ಸೊಂಟಕ್ಕೆ ಬಿಗಿದೂಕೊಂಡೇ ಕೆಲಸ ಮಾಡಿದರು. ಜನರನ್ನು ಎಚ್ಚರಗೊಳಿಸಲು ತುತ್ತೂರಿ ಊದುವವನು ನನ್ನ ಬಳಿಯಲ್ಲಿಯೇ ನಿಂತಿರುತ್ತಿದ್ದನು.
19 ಆಗ ನಾನು ಪ್ರಮುಖ ಕುಟುಂಬಗಳವರನ್ನೂ ಅಧಿಕಾರಿಗಳನ್ನೂ ಮತ್ತು ಉಳಿದ ಜನರನ್ನೂ ಕರೆದು, “ನಾವು ಮಾಡುತ್ತಿರುವುದು ಬಹು ದೊಡ್ಡ ಕಾರ್ಯ; ಗೋಡೆಯ ಉದ್ದಕ್ಕೂ ಚದರಿ ಒಬ್ಬರಿಗೊಬ್ಬರು ತುಂಬಾ ದೂರದಲ್ಲಿದ್ದೇವೆ.
20 ತುತ್ತೂರಿಯ ಶಬ್ದ ಕೇಳಿದ ಕೂಡಲೇ ನೀವು ಅಲ್ಲಿಗೆ ಹೋಗಬೇಕು. ನಾವೆಲ್ಲಾ ಆ ಸ್ಥಳದಲ್ಲಿ ಒಟ್ಟಾಗಿ ಸೇರಬೇಕು. ನಮ್ಮ ದೇವರು ನಮಗಾಗಿ ಯುದ್ಧ ಮಾಡುವನು” ಎಂದೆನು.
21 ಹೀಗೆ ನಾವು ಗೋಡೆ ಕಟ್ಟುವ ಕಾರ್ಯವನ್ನು ಮುಂದುವರಿಸಿದೆವು. ಅರ್ಧ ಜನರು ಭರ್ಜಿಗಳನ್ನು ಹಿಡಿದುಕೊಂಡರು. ಮುಂಜಾನೆಯ ಸೂರ್ಯನ ಕಿರಣ ಬೀಳುವ ಹೊತ್ತಿನಿಂದ ಹಿಡಿದು ರಾತ್ರಿ ನಕ್ಷತ್ರಗಳು ಕಾಣುವ ತನಕ ನಾವು ಕೆಲಸದಲ್ಲಿ ನಿರತರಾಗಿರುತ್ತಿದ್ದೆವು.
22 “ಪ್ರತಿಯೊಬ್ಬ ಕೆಲಸಗಾರನೂ ಅವನ ಸಹಾಯಕನೂ ಜೆರುಸಲೇಮಿನೊಳಗೇ ರಾತ್ರಿಯನ್ನು ಕಳೆಯಬೇಕು. ರಾತ್ರಿ ಕಾಲದಲ್ಲಿ ಅವರು ಪಹರೆಯವರಾಗಿಯೂ ಹಗಲಲ್ಲಿ ಗೋಡೆ ಕಟ್ಟುವವರಾಗಿಯೂ ಇರಬೇಕು” ಎಂದು ನಾನು ಜನರಿಗೆ ಹೇಳಿದೆನು.
23 ಇದರಿಂದಾಗಿ ಯಾರೂ ತಮ್ಮ ವಸ್ತ್ರಗಳನ್ನು ಬದಲಾಯಿಸಲಿಲ್ಲ. ನಾನಾಗಲಿ ನನ್ನ ಬಂಧುಗಳಾಗಲಿ ನನ್ನ ಜನರಾಗಲಿ ಪಹರೆಯವರಾಗಲಿ ವಸ್ತ್ರಗಳನ್ನು ಬದಲಾಯಿಸದೆ ಆಯುಧಗಳನ್ನು ಧರಿಸಿಕೊಂಡೇ ಇದ್ದೆವು. ನೀರು ಕುಡಿಯುವಾಗಲೂ ಆಯುಧ ಸನ್ನದ್ಧರಾಗಿರುತ್ತಿದ್ದೆವು.