18
ಅಹಾಬನಿಗೆ ಮೀಕಾಯೆಹುವಿನ ಎಚ್ಚರ
ಯೆಹೋಷಾಫಾಟನಿಗೆ ಅತ್ಯಧಿಕವಾದ ಐಶ್ವರ್ಯವೂ ಘನತೆಯೂ ಇದ್ದವು. ಅವನು ಅರಸನಾದ ಅಹಾಬನೊಂದಿಗೆ ತನ್ನ ಮದುವೆಯ ಮೂಲಕ ಸಂಬಂಧ ಬೆಳೆಸಿಕೊಂಡನು. ಕೆಲವು ವರ್ಷಗಳ ನಂತರ ಯೆಹೋಷಾಫಾಟನು ಸಮಾರ್ಯ ಪಟ್ಟಣದಲ್ಲಿ ಅಹಾಬನನ್ನು ಸಂಧಿಸಲು ಹೋದನು. ಯೆಹೋಷಾಫಾಟನಿಗೂ ಅವನೊಂದಿಗೆ ಬಂದಿದ್ದ ಜನರಿಗೂ ಅಹಾಬನು ಅನೇಕ ದನಕುರಿಗಳನ್ನು ವಧಿಸಿ ಔತಣಮಾಡಿಸಿದನು. ರಾಮೋತ್‌ಗಿಲ್ಯೋದ್ ಪಟ್ಟಣದ ಮೇಲೆ ಯುದ್ಧಮಾಡಲು ಅಹಾಬನು ಯೆಹೋಷಾಫಾಟನನ್ನು ಪ್ರೇರೇಪಿಸಿದನು. ಇಸ್ರೇಲರ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ನನ್ನೊಂದಿಗೆ ರಾಮೋತ್‌ಗಿಲ್ಯಾದಿಗೆ ಯುದ್ಧಮಾಡಲು ಬರುವಿಯಾ?” ಎಂದು ಕೇಳಲು, ಯೆಹೋಷಾಫಾಟನು, “ನಾನು ನಿನ್ನವನೆ, ನನ್ನ ಜನರು ನಿನ್ನ ಜನರೇ ಆಗಿದ್ದಾರೆ. ನಾವು ಯುದ್ಧಮಾಡಲು ನಿಮ್ಮೊಂದಿಗೆ ಬರುತ್ತೇವೆ” ಎಂದು ಅಹಾಬನಿಗೆ ಉತ್ತರಿಸಿದನು. ಯೆಹೋಷಾಫಾಟನು ಅಹಾಬನಿಗೆ, “ಆದರೆ ಮೊದಲು ನಾವು ಯೆಹೋವನನ್ನು ವಿಚಾರಿಸೋಣ” ಅಂದನು.
ಆಗ ಅಹಾಬನು ನಾನೂರು ಮಂದಿ ಪ್ರವಾದಿಗಳನ್ನು ಒಟ್ಟಾಗಿ ಸೇರಿಸಿ ಅವರಿಗೆ, “ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬೇಕೋ ಬೇಡವೋ?” ಎಂದು ಕೇಳಿದಾಗ
ಆ ಪ್ರವಾದಿಗಳು ಅಹಾಬನಿಗೆ, “ಹೋಗು, ದೇವರು ರಾಮೋತ್‌ಗಿಲ್ಯಾದನ್ನು ಸೋಲಿಸುವಂತೆ ಮಾಡುವನು” ಎಂದು ಹೇಳಿದರು.
ಆಗ ಯೆಹೋಷಾಫಾಟನು, “ಈ ಪ್ರವಾದಿಗಳಲ್ಲದೆ ಬೇರೆ ಪ್ರವಾದಿಗಳಿಲ್ಲವೆ? ಅವರ ಮೂಲಕ ನಾವು ಯೆಹೋವನನ್ನು ಕೇಳೋಣ” ಎಂದನು.
ಆಗ ಅರಸನಾದ ಅಹಾಬನು, “ಇನ್ನೂ ಒಬ್ಬನು ಇದ್ದಾನೆ. ನಾವು ಅವನಿಂದ ಯೆಹೋವನನ್ನು ವಿಚಾರಿಸಬಹುದು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ. ಯಾಕೆಂದರೆ ನನ್ನ ವಿಷಯವಾಗಿ ಯೆಹೋವನಿಂದ ಯಾವ ಒಳ್ಳೆಯ ಸಂದೇಶವನ್ನೂ ಅವನು ಕೊಡುವದಿಲ್ಲ. ನನ್ನ ಬಗ್ಗೆ ಯಾವಾಗಲೂ ಕೆಟ್ಟದ್ದನ್ನೇ ನುಡಿಯುತ್ತಾನೆ. ಅವನು ಇಮ್ಲನ ಮಗನಾದ ಮೀಕಾಯೆಹುವು” ಅಂದನು.
ಅದಕ್ಕೆ ಯೆಹೋಷಾಫಾಟನು, “ಅಹಾಬನೇ, ನೀನು ಹಾಗೆ ಹೇಳಬಾರದು” ಅಂದನು.
ಆಗ ಅಹಾಬನು ತನ್ನ ಸೇವಕರಲ್ಲೊಬ್ಬನನ್ನು ಕರೆದು, “ಬೇಗ ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.
ಇಸ್ರೇಲರ ಅರಸನಾದ ಅಹಾಬನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ತಮ್ಮ ರಾಜವಸ್ತ್ರಗಳನ್ನು ಧರಿಸಿದ್ದರು. ಅವರು ಸಮಾರ್ಯ ಪಟ್ಟಣದ ಮುಂಭಾಗದ ಬಾಗಿಲಿನೆದುರು ಸಿಂಹಾಸನಗಳ ಮೇಲೆ ಕುಳಿತಿದ್ದರು. ಆ ನಾನೂರು ಮಂದಿ ಪ್ರವಾದಿಗಳು ಅವರ ಮುಂದೆ ನಿಂತುಕೊಂಡು ಪ್ರವಾದಿಸುತ್ತಿದ್ದರು. 10 ಚಿದ್ಕೀಯನು ಕೆನಾನನ ಮಗ. ಚಿದ್ಕೀಯನು ಕಬ್ಬಿಣದ ಕೊಂಬುಗಳನ್ನು ತಯಾರಿಸಿ, “ಇದು ಯೆಹೋವನ ನುಡಿ. ಈ ಕಬ್ಬಿಣದ ಕೊಂಬುಗಳಿಂದಲೋ ಎಂಬಂತೆ ನೀನು ಅರಾಮ್ಯರನ್ನು ನಾಶಮಾಡುವೆ” ಎಂದು ಹೇಳಿದನು. 11 ಅಲ್ಲಿದ್ದ ಪ್ರವಾದಿಗಳೆಲ್ಲರೂ ಅದನ್ನೇ ನುಡಿದರು. ಅವರು, “ನೀನು ರಾಮೋತ್‌ಗಿಲ್ಯಾದಿಗೆ ಹೋಗು. ನಿನಗಲ್ಲಿ ಜಯವಾಗುವದು. ಯೆಹೋವನು ಅರಾಮ್ಯರನ್ನು ಸೋಲಿಸುವಂತೆ ನಿನಗೆ ಸಹಾಯಮಾಡುವನು” ಎಂದರು.
12 ಮೀಕಾಯೆಹುವಿನ ಬಳಿಗೆ ಹೋದ ರಾಜನ ಸೇವಕನು ಅವನಿಗೆ, “ಮೀಕಾಯೆಹುವೇ ಕೇಳು, ಎಲ್ಲಾ ಪ್ರವಾದಿಗಳೂ ರಾಜನು ಗೆಲ್ಲುವನು ಎಂದು ಪ್ರವಾದಿಸುತ್ತಿದ್ದಾರೆ. ಅದನ್ನೇ ನೀನು ಹೇಳಿ ಅರಸನಿಗೆ ಶುಭವನ್ನು ಹಾರೈಸಬೇಕು” ಅಂದನು.
13 ಆದರೆ ಮೀಕಾಯೆಹುವು, “ಯೆಹೋವನಾಣೆ, ಆತನು ಹೇಳಿದ್ದನ್ನೇ ನಾನು ಹೇಳುವೆನು” ಎಂದನು.
14 ಮೀಕಾಯೆಹುವು ಅಹಾಬನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ, ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬಹುದೋ?” ಎಂದು ವಿಚಾರಿಸಿದಾಗ
ಮೀಕಾಯೆಹುವು, “ಹೋಗಿ, ಯುದ್ಧಮಾಡು. ದೇವರು ಅವರನ್ನು ನಿನ್ನ ಕೈಗಳಿಗೆ ಒಪ್ಪಿಸುವನು” ಎಂದು ಹೇಳಿದನು.
15 ಆಗ ಅಹಾಬನು ಮೀಕಾಯೆಹುವಿಗೆ, “ನೀನು ಯೆಹೋವನ ಹೆಸರಿನಲ್ಲಿ ನನಗೆ ಸತ್ಯವನ್ನೇ ತಿಳಿಸಬೇಕೆಂದು ಎಷ್ಟೋ ಸಲ ನಿನ್ನಿಂದ ಪ್ರಮಾಣ ಮಾಡಿಸಿರುತ್ತೇನೆ” ಎಂದು ಹೇಳಿದಾಗ ಮೀಕಾಯೆಹುವು,
16 “ಇಸ್ರೇಲಿನ ಜನರೆಲ್ಲರೂ ಬೆಟ್ಟಪ್ರದೇಶಗಳಲ್ಲಿ ಚದರಿರುವದನ್ನು ಕಂಡೆನು. ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಕರ್ತನು ಹೇಳಿದ್ದೇನೆಂದರೆ, ‘ಅವರಿಗೆ ನಾಯಕರಿಲ್ಲ, ಆದ್ದರಿಂದ ಸುರಕ್ಷಿತವಾಗಿ ಮನೆಗೆ ಹಿಂದಿರುಗಲಿ’ ” ಎಂದು ಹೇಳಿದನು.
17 ಇಸ್ರೇಲಿನ ರಾಜನಾದ ಅಹಾಬನು ಯೆಹೋಷಾಫಾಟನಿಗೆ, “ಮೀಕಾಯೆಹುವು ನನ್ನ ಬಗ್ಗೆ ಯೆಹೋವನಿಂದ ಒಳ್ಳೆಯ ಸಂದೇಶವನ್ನು ಕೊಡುವದೇ ಇಲ್ಲವೆಂದು ನಿನಗೆ ಹೇಳಿದೆನಲ್ಲಾ? ಅವನಲ್ಲಿ ನನ್ನ ವಿಷಯವಾಗಿ ಕೆಟ್ಟ ಸಂದೇಶವೇ ಇರುವದು” ಎಂದು ಹೇಳಿದನು.
18 ಮೀಕಾಯೆಹುವು, “ಯೆಹೋವನಿಂದ ಬಂದ ಸಂದೇಶವನ್ನು ಕೇಳು. ಯೆಹೋವನು ಸಿಂಹಾಸನದಲ್ಲಿ ಕುಳಿತಿರುವದನ್ನು ನಾನು ಕಂಡೆನು. ಅವನ ಎಡಬಲಗಳಲ್ಲಿ ಪರಲೋಕದ ಸೈನ್ಯವು ನಿಂತಿತ್ತು. 19 ‘ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಮಾಡಲು ಅಹಾಬನನ್ನು ಯಾರು ಮರುಳುಗೊಳಿಸುವರು? ಯಾಕೆಂದರೆ ಅಲ್ಲಿ ಅವನು ಸಾಯಬೇಕು’ ಎಂದು ಯೆಹೋವನು ಕೇಳಿದಾಗ ಅಲ್ಲಿ ನಿಂತಿದ್ದವರು ಬೇರೆಬೇರೆ ವಿಧಾನವನ್ನು ತಿಳಿಸಿದರು. 20 ಆಗ ಒಂದು ಆತ್ಮವು ದೇವರ ಮುಂದೆ ನಿಂತು, ‘ನಾನು ಅಹಾಬನನ್ನು ಮರುಳುಗೊಳಿಸುತ್ತೇನೆ’ ಎಂದು ಹೇಳಿತು. ‘ಹೇಗೆ?’ ಎಂದು ಆತನು ಕೇಳಿದನು. 21 ಅದಕ್ಕೆ ಆತ್ಮವು, ‘ನಾನು ಹೋಗಿ ಅಹಾಬನ ಪ್ರವಾದಿಗಳಿಗೆ ಸುಳ್ಳುಹೇಳುವ ಆತ್ಮವಾಗುತ್ತೇನೆ’ ಎಂದು ಹೇಳಿತು. ಅದಕ್ಕೆ ಆತನು ‘ಸರಿ, ಹಾಗೆಯೇ ಮಾಡು. ನೀನು ನಿನ್ನ ಕಾರ್ಯದಲ್ಲಿ ಸಫಲವಾಗುವೆ’ ಎಂದು ಹೇಳಿದನು.
22 “ಆದ್ದರಿಂದ ಅಹಾಬನೇ, ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳುಹೇಳುವ ಆತ್ಮವನ್ನು ಯೆಹೋವನೇ ಇರಿಸಿದ್ದಾನೆ; ನಿನಗೆ ಕೇಡಾಗುವುದೆಂದು ಯೆಹೋವನೇ ತಿಳಿಸುತ್ತಾನೆ” ಎಂದನು.
23 ಆಗ ಚಿದ್ಕೀಯನು ಮುಂದೆ ಬಂದು ಮೀಕಾಯೆಹುವಿನ ಕೆನ್ನೆಗೆ ಹೊಡೆದು, “ಮೀಕಾಯೆಹುವೇ, ಯೆಹೋವನ ಆತ್ಮನು ನಿನ್ನೊಂದಿಗೆ ಮಾತಾಡಲು ನನ್ನ ಬಳಿಯಿಂದ ಬಂದಾಗ ಯಾವ ಕಡೆಗೆ ಹೋದನು?” ಎಂದು ಗೇಲಿಮಾಡಿದಾಗ,
24 ಮೀಕಾಯೆಹುವು, “ಚಿದ್ಕೀಯನೇ, ನೀನು ಒಳಕೋಣೆಯೊಳಗೆ ಅವಿತು ಕುಳಿತಿರುವ ದಿನದಲ್ಲಿ ನಿನಗೆ ತಿಳಿಯುವದು” ಎಂದು ಹೇಳಿದನು.
25 ಆಗ ಅರಸನಾದ ಅಹಾಬನು, ಮೀಕಾಯೆಹುವನ್ನು ತೆಗೆದುಕೊಂಡು ನಗರಪಾಲಕನಾದ ಅಮೋನನಿಗೂ ಮತ್ತು ರಾಜಕುಮಾರನಾದ ಯೋವಾಷನಿಗೂ ಕೊಟ್ಟು, 26 ಅವರಿಗೆ “ಮೀಕಾಯೆಹುವನ್ನು ಸೆರೆಮನೆಗೆ ಹಾಕಿ. ನಾನು ಯುದ್ಧದಿಂದ ಸುರಕ್ಷಿತವಾಗಿ ಹಿಂತಿರುಗುವ ತನಕ ಬರಿ ರೊಟ್ಟಿ ಮತ್ತು ನೀರನ್ನು ಮಾತ್ರ ಅವನಿಗೆ ಕೊಡಿ ಎಂದು ಅರಸನು ಆಜ್ಞಾಪಿಸುತ್ತಾನೆ ಎಂದು ಹೇಳಿ” ಎಂದನು.
27 ಆಗ ಮೀಕಾಯೆಹುವು, “ಅಹಾಬನೇ, ನೀನು ರಣರಂಗದಿಂದ ಸುರಕ್ಷಿತವಾಗಿ ಬಂದರೆ ಯೆಹೋವನು ನನ್ನ ಮೂಲಕ ಮಾತನಾಡಲಿಲ್ಲವೆಂದು ತಿಳಿದುಕೋ. ಜನರೇ, ನನ್ನ ಮಾತನ್ನು ಕೇಳಿ ನೆನಪಿನಲ್ಲಿಡಿರಿ” ಎಂದು ಉತ್ತರಕೊಟ್ಟನು.
ರಾಮೋತ್‌ಗಿಲ್ಯಾದಿನಲ್ಲಿ ಅಹಾಬನು ಕೊಲ್ಲಲ್ಪಟ್ಟದ್ದು
28 ಇಸ್ರೇಲಿನ ರಾಜನಾದ ಅಹಾಬನೂ ಯೆಹೂದದ ರಾಜನಾದ ಯೆಹೋಷಾಫಾಟನೂ ರಾಮೋತ್‌ಗಿಲ್ಯಾದ್ ಪಟ್ಟಣದ ಮೇಲೆ ಧಾಳಿ ಮಾಡಿದರು. 29 ಯೆಹೋಷಾಫಾಟನಿಗೆ ಅಹಾಬನು, “ನಾನು ಯುದ್ಧರಂಗಕ್ಕೆ ಹೋಗುವ ಮೊದಲು ವೇಷ ಬದಲಾಯಿಸುತ್ತೇನೆ. ನೀನು ರಾಜವಸ್ತ್ರದಲ್ಲಿಯೇ ಇರು” ಎಂದು ಹೇಳಿ ತನ್ನ ರೂಪವನ್ನು ಬದಲಾಯಿಸಿದನು. ಇಬ್ಬರು ರಾಜರೂ ಯುದ್ಧರಂಗಕ್ಕಿಳಿದರು.
30 ಅರಾಮ್ಯರ ರಾಜನು ತನ್ನ ರಥದ ಅಧಿಪತಿಗಳಿಗೆ, “ನೀವು ಜನರೊಂದಿಗೆ ಯುದ್ಧಮಾಡಬೇಡಿರಿ, ಅಧಿಕಾರಿಗಳ ಮತ್ತು ಸಾಮಾನ್ಯ ಸೈನಿಕರ ಗೊಡವೆಗೆ ಹೋಗಬೇಡಿರಿ. ಆದರೆ ನೀವು ಇಸ್ರೇಲಿನ ರಾಜನಾದ ಅಹಾಬನೊಂದಿಗೇ ಯುದ್ಧಮಾಡಿರಿ” ಎಂದು ಹೇಳಿದನು. 31 ರಥಾಧಿಪತಿಗಳು ಯೆಹೋಷಾಫಾಟನನ್ನು ನೋಡಿದಾಗ ಅವನೇ ಅಹಾಬನೆಂದೆಣಿಸಿ ಅವನ ಮೇಲೆ ದಾಳಿ ನಡೆಸಿದರು. ಆದರೆ ಯೆಹೋಷಾಫಾಟನು ಗಟ್ಟಿಯಾಗಿ ಕೂಗಿಕೊಂಡನು. ಆಗ ಯೆಹೋವನು ಅವನಿಗೆ ಸಹಾಯಮಾಡಿ ರಥಾಧಿಪತಿಗಳು ಅವನಿಂದ ಬೇರೆ ಕಡೆಗೆ ತಿರುಗುವಂತೆ ಮಾಡಿದನು. 32 ಯೆಹೋಷಾಫಾಟನು ಇಸ್ರೇಲಿನ ರಾಜನಲ್ಲವೆಂದು ಅವರು ತಿಳಿದು ಅವನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರು.
33 ಆದರೆ ಒಬ್ಬ ಸಿಪಾಯಿಯು ಬಿಲ್ಲು ತೆಗೆದು ಬಾಣವನ್ನು ಹೂಡಿ ಗುರಿಯಿಲ್ಲದೆ ಹೊಡೆದಾಗ ಆ ಬಾಣವು ಬಂದು ಇಸ್ರೇಲರ ರಾಜನಾದ ಅಹಾಬನಿಗೆ ತಾಗಿತು. ಅವನ ಕವಚದ ಸಂದಿನಿಂದ ಅವನ ದೇಹದೊಳಗೆ ಹೊಕ್ಕಿತು. ಆಗ ಅವನು ತನ್ನ ರಥವನ್ನೋಡಿಸುವ ರಾಹುತನಿಗೆ, “ರಥವನ್ನು ಹಿಂದಕ್ಕೆ ತಿರುಗಿಸಿ ನನ್ನನ್ನು ರಣರಂಗದಿಂದ ಹೊರಕ್ಕೆ ಕರೆದುಕೊಂಡು ಹೋಗು. ನಾನು ಗಾಯಗೊಂಡಿದ್ದೇನೆ” ಅಂದನು.
34 ಆ ದಿವಸ ಯುದ್ಧವು ಬಲುಘೋರವಾಗಿ ನಡೆಯಿತು. ಅಹಾಬನು ರಥದ ಕಂಬಕ್ಕೆ ಒರಗಿ ಸಂಜೆಯ ತನಕ ಹಾಗೆಯೇ ಅರಾಮ್ಯರ ಎದುರು ನಿಂತುಕೊಂಡಿದ್ದನು. ಸೂರ್ಯಾಸ್ತಮಾನವಾದಾಗ ಅಹಾಬನು ಸತ್ತನು.