19
ಯೆಹೂದದ ರಾಜನಾದ ಯೆಹೋಷಾಫಾಟನು ಜೆರುಸಲೇಮಿನಲ್ಲಿದ್ದ ತನ್ನ ಮನೆಗೆ ಸುರಕ್ಷಿತವಾಗಿ ಹಿಂದಿರುಗಿದನು. ದೇವದರ್ಶಿಯಾದ ಯೇಹೂ ಅವನನ್ನು ಎದುರುಗೊಂಡನು. ಅವನು ಹನಾನೀಯನ ಮಗ. ರಾಜನಿಗೆ ಯೇಹುವು ಹೇಳಿದ್ದೇನೆಂದರೆ, “ನೀನು ದುಷ್ಟಜನರಿಗೆ ಸಹಾಯಮಾಡಿದ್ದೇಕೆ? ಯೆಹೋವನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸಿದ್ದೇಕೆ? ಆ ಕಾರಣಕ್ಕಾಗಿ ಯೆಹೋವನು ನಿನ್ನ ಮೇಲೆ ಕೋಪಗೊಂಡಿದ್ದಾನೆ. ಆದರೆ ನಿನ್ನಲ್ಲಿ ಕೆಲವಾರು ಒಳ್ಳೆಯ ವಿಷಯಗಳಿವೆ. ನೀನು ಈ ದೇಶದೊಳಗಿದ್ದ ಅಶೇರಕಂಬಗಳನ್ನು ತೆಗೆದುಹಾಕಿಸಿದೆ; ಯೆಹೋವನನ್ನು ಹಿಂಬಾಲಿಸಲು ನಿನ್ನ ಹೃದಯದಲ್ಲಿ ತೀರ್ಮಾನಿಸಿದೆ” ಅಂದನು.
ಯೆಹೋಷಾಫಾಟನು ನ್ಯಾಯಾಧಿಪತಿಗಳನ್ನು ಆರಿಸಿದ್ದು
ಯೆಹೋಷಾಫಾಟನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಬೇರ್ಷೆಬ ನಗರದಿಂದ ಹಿಡಿದು ಎಫ್ರಾಯೀಮ್ ಬೆಟ್ಟದ ಪ್ರದೇಶದ ಜನರನ್ನೆಲ್ಲಾ ಸಂದರ್ಶಿಸಿದನು. ಯೆಹೋಷಾಫಾಟನು ಈ ಜನರನ್ನೆಲ್ಲ ಅವರ ಪೂರ್ವಿಕರ ದೇವರಾದ ಯೆಹೋವನ ಬಳಿಗೆ ಮತ್ತೆ ಕರೆದುಕೊಂಡು ಬಂದನು. ಯೆಹೋಷಾಫಾಟನು ಯೆಹೂದ ಪ್ರಾಂತ್ಯದಲ್ಲಿ ನ್ಯಾಯಾಧಿಪತಿಗಳನ್ನು ಆರಿಸಿದನು. ಯೆಹೂದದ ಪ್ರತಿಯೊಂದು ಕೋಟೆಯ ಪಟ್ಟಣಗಳಿಗೆ ನ್ಯಾಯಾಧಿಪತಿಗಳನ್ನು ನೇಮಕ ಮಾಡಿದನು. ಅವನು ಅವರಿಗೆ, “ನೀವು ಮಾಡುವ ಕಾರ್ಯದಲ್ಲಿ ಜಾಗರೂಕರಾಗಿರಿ. ನೀವು ಯೆಹೋವನ ಪರವಾಗಿ ಜನರ ನ್ಯಾಯವನ್ನು ತೀರಿಸುವವರಾಗಿದ್ದೀರಿ. ನೀವು ನ್ಯಾಯತೀರಿಸುವಾಗ ಯೆಹೋವನು ನಿಮ್ಮ ಸಂಗಡ ಇರುವನು. ನಿಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗೆ ಭಯಪಡುವವರಾಗಿರಬೇಕು. ಆತನು ನ್ಯಾಯವಂತನಾಗಿದ್ದಾನೆ. ಆತನಿಗೆ ಎಲ್ಲಾ ಜನರು ಸಮಾನರೇ. ಆತನು ಲಂಚ ಸ್ವೀಕರಿಸಿ ನ್ಯಾಯವನ್ನು ಬದಲಾಯಿಸುವದಿಲ್ಲ” ಎಂದು ಹೇಳಿದನು.
ಜೆರುಸಲೇಮಿನೊಳಗೆ ಯೆಹೋಷಾಫಾಟನು ಲೇವಿಯರಲ್ಲಿ, ಯಾಜಕರಲ್ಲಿ ಮತ್ತು ಇಸ್ರೇಲರ ನಾಯಕರಲ್ಲಿ ಕೆಲವರನ್ನು ನ್ಯಾಯಾಧಿಪತಿಗಳನ್ನಾಗಿ ಆರಿಸಿದನು. ಇವರು ಜನರ ಜಗಳಗಳನ್ನು ಮತ್ತು ಸಮಸ್ಯೆಗಳನ್ನು ಯೆಹೋವನ ಕಟ್ಟಳೆಗಳ ಪ್ರಕಾರ ತೀರಿಸಬೇಕಾಗಿತ್ತು. ಯೆಹೋಷಾಫಾಟನು ಅವರಿಗೆ, “ನೀವು ಹೃದಯಪೂರ್ವಕವಾಗಿ ನಿಮ್ಮ ಕೆಲಸ ನಡಿಸಬೇಕು. ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. 10 ನಿಮ್ಮ ಬಳಿಗೆ ಕೊಲೆಯ ಪ್ರಕರಣಗಳ ಬಗ್ಗೆ, ಕಟ್ಟಳೆಯ ಬಗ್ಗೆ, ಆಜ್ಞೆಯ ಬಗ್ಗೆ, ನಿಯಮದ ಬಗ್ಗೆ ಮತ್ತು ಬೇರೆ ಯಾವುದಾದರೂ ಕಟ್ಟಳೆಯ ಬಗ್ಗೆ ಬಗೆಹರಿಸಲು ಬರಬಹುದು. ಅವೆಲ್ಲಾ ನಿಮ್ಮ ಸಹೋದರರಿಂದಲೇ ಬರುವವು. ದೇವರಿಗೆ ವಿರುದ್ಧವಾಗಿ ಪಾಪಮಾಡಬಾರದೆಂಬುದಾಗಿ ಅವರಿಗೆಲ್ಲಾ ಎಚ್ಚರಿಸಬೇಕು. ನೀವು ನಂಬಿಗಸ್ತಿಕೆಯಿಂದ ಸೇವೆಮಾಡದಿದ್ದಲ್ಲಿ ನಿಮ್ಮ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ ದೇವರ ಕೋಪ ಉರಿಯುವಂತೆ ಮಾಡಿಕೊಳ್ಳುವಿರಿ. ನೀವು ತಪ್ಪಿತಸ್ಥರಾಗದೆ ನಂಬಿಗಸ್ತಿಕೆಯಿಂದ ಸೇವೆಮಾಡಿರಿ.
11 “ಅಮರ್ಯನು ನಿಮ್ಮ ಪ್ರಧಾನಯಾಜಕನು. ಯೆಹೋವನ ಕಾರ್ಯಗಳಿಗೆಲ್ಲಾ ಅವನೇ ನಿಮಗೆ ಪ್ರಮುಖನು. ಯೆಹೋವನ ಕುರಿತಾದ ಸಂಗತಿಗಳ ಬಗ್ಗೆ ಜೆಬದ್ಯನು ಪ್ರಮುಖನಾಗಿರುವನು. ಅವನು ಯೆಹೂದ ಕುಲದ ಇಷ್ಮಾಯೇಲನ ಮಗ. ಲೇವಿಯರು ನಿಮಗಾಗಿ ಬರವಣಿಗೆಯ ಕೆಲಸವನ್ನು ಮಾಡುವರು. ನೀವು ಮಾಡುವ ಕಾರ್ಯಗಳಲ್ಲಿ ಧೈರ್ಯಶಾಲಿಗಳಾಗಿರಿ. ಯೆಹೋವನು ನೀತಿವಂತರೊಂದಿಗಿರುವನು” ಎಂದು ಹೇಳಿದನು.