5
ಸಭೆಯಲ್ಲಿ ನಡೆದಿದ್ದ ವಿಪರೀತ ಜಾರತ್ವವನ್ನು ಕುರಿತದ್ದು
1 ನಿಮ್ಮಲ್ಲಿ ಜಾರತ್ವವುಂಟೆಂಬ ಸುದ್ದಿಯನ್ನು ನಾನು ಕೇಳಿದ್ದೇನೆ. ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ. ಅಂಥ ಜಾರತ್ವವು ಅನ್ಯಜನರಲ್ಲಿಯೂ ಸಹ ಇಲ್ಲ.
2 ಹೀಗಿದ್ದರೂ ನೀವು ದುಃಖಿಸದೆ, ಈ ಕಾರ್ಯಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸದೆ, ಉಬ್ಬಿಕೊಂಡಿದ್ದೀರಲ್ಲಾ.
3 ನಾನಂತೂ ಶಾರೀರಿಕವಾಗಿ ನಿಮ್ಮಿಂದ ದೂರವಾಗಿದ್ದರೂ, ಆತ್ಮದಿಂದ ಹತ್ತಿರದಲ್ಲಿದ್ದು ಈ ಕಾರ್ಯ ಮಾಡಿದವನನ್ನು ಕುರಿತು ಆಗಲೇ ನಿಮ್ಮ ಹತ್ತಿರವಿದ್ದವನಂತೆ ತೀರ್ಪು ಮಾಡಿದ್ದೇನೆ.
4 ನಮ್ಮ ಕರ್ತನಾದ ಯೇಸುವಿನ ನಾಮದಲ್ಲಿ ನೀವೆಲ್ಲರೂ ಸೇರಿ ಬರುವಾಗ ನಾನು ಆತ್ಮದಿಂದ ನಿಮ್ಮೊಂದಿಗಿರುತ್ತೇನೆ ಹಾಗೂ
5 ಅವನನ್ನು ಸೈತಾನನಿಗೆ ಒಪ್ಪಿಸಿರಿ ಯಾಕೆಂದರೆ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವುದಕ್ಕಾಗಿ ಅವನ ಶರೀರಭಾವವು ನಾಶವಾಗುವಂತೆ ಕರ್ತನಾದ ಯೇಸುವಿನ ಶಕ್ತಿಯಿಂದ ತೀರ್ಪು ಮಾಡಿದ್ದೇನೆ.
6 ನೀವು ಹೊಗಳಿಕೊಳ್ಳುವುದು ಒಳ್ಳೆಯದಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ?
7 ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೇ ಹುಳಿಯನ್ನು ತೆಗೆದುಹಾಕಿ ಹೊಸ ಕಣಕದಂತಾಗಿರಿ. ಯಾಕೆಂದರೆ ಈಗಾಗಲೇ ನಮ್ಮ ಪಸ್ಕ ಯಜ್ಞದ ಕುರಿಮರಿಯು ಬಲಿಯಾಗಿದೆ; ಆ ಕುರಿಮರಿ ಯಾವುದೆಂದರೆ ಕ್ರಿಸ್ತನೇ.
8 ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ಮತ್ತು ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೇ ಪ್ರಾಮಾಣಿಕತೆ ಹಾಗೂ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ.
9 ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೇನೆ.
10 ಅದು ಈ ಲೋಕದಲ್ಲಿರುವ ಜಾರರು, ಆಸೆಬುರುಕರು, ಸುಲುಕೊಳ್ಳುವವರು, ವಿಗ್ರಹಾರಾಧಕರು, ಮೊದಲಾದವರ ಸಹವಾಸವನ್ನು ಬಿಟ್ಟುಬಿಡಬೇಕೆಂಬ ಅರ್ಥದಲ್ಲಿ ಅಲ್ಲ; ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು.
11 ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ.
12 ಸಭೆಯ ಹೊರಗಿರುವವರನ್ನು ತೀರ್ಪುಮಾಡುವುದಕ್ಕೆ ನನಗೇನಧಿಕಾರವಿದೆ? ಒಳಗಿನವರನ್ನು ತೀರ್ಪುಮಾಡುವವರು ನೀವೇ ಅಲ್ಲವೇ.
13 ಹೊರಗಿರುವವರನ್ನು ತೀರ್ಪುಮಾಡುವವನು ದೇವರು. “ನಿಮ್ಮ ಮಧ್ಯದಲ್ಲಿರುವ ಆ ದುಷ್ಟ ವ್ಯಕ್ತಿಯನ್ನು ತೆಗೆದುಹಾಕಿರಿ.”