6
ಕ್ರೈಸ್ತರು ಕ್ರೈಸ್ತರಲ್ಲದವರ ಮುಂದೆ ವ್ಯಾಜ್ಯವಾಡಿದ್ದನ್ನು ಕುರಿತದ್ದು
1 ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ಏನಾದರೂ ವಿವಾದವಿದ್ದರೆ ನ್ಯಾಯವಿಚಾರಣೆಗೆ ದೇವಜನರೆದುರು ತೆಗೆದುಕೊಂಡು ಹೋಗದೇ ಅನ್ಯಜನರ ಮುಂದೆ ತೆಗೆದುಕೊಂಡು ಹೋಗುವಿರೋ?
2 ದೇವಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪನ್ನು ಹೊಂದಬೇಕಾಗಿರುವಲ್ಲಿ ಅತ್ಯಲ್ಪವಾದ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅನರ್ಹರಾಗಿದ್ದೀರೋ?
3 ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಹಾಗಾದರೆ ಇಹಲೋಕ ಜೀವನದ ವಿಷಯಗಳ ಕುರಿತು ನಾವು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ?
4 ಇಹಲೋಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ನ್ಯಾಯ ನಿರ್ಣಯಿಸುವುದಕ್ಕೆ ನಿಮ್ಮಲ್ಲಿದ್ದರೆ, ಇಂಥ ವಿಷಯಗಳನ್ನು ತೀರ್ಪು ಮಾಡುವುದಕ್ಕೆ ಸಭೆಯಲ್ಲಿ ಗಣನೆಗೆ ಬಾರದವರನ್ನು ಏಕೆ ನೇಮಿಸಿಕೊಳ್ಳುತ್ತೀರಿ?
5 ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಹೇಳುತ್ತಿದ್ದೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?
6 ಆದರೆ ಅದಕ್ಕೆ ಬದಲಾಗಿ ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅಲ್ಲದೆ ಅದನ್ನು ಅವಿಶ್ವಾಸಿಯ ಮುಂದೆ ತೆಗೆದುಕೊಂಡು ಹೋಗುವುದು ಸರಿಯೋ?
7 ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ನಷ್ಟವನ್ನು ಯಾಕೆ ತಾಳಬಾರದು?
8 ಆದರೆ ನೀವು ನಿಮ್ಮ ಸ್ವಂತ ಸಹೋದರರಿಗೆ ಅನ್ಯಾಯವನ್ನು ಮತ್ತು ಮೋಸವನ್ನು ಮಾಡಿದ್ದೀರಿ.
9 ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು,
10 ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
11 ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೆ ನೀವು ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ತೊಳೆಯಲ್ಪಟ್ಟು, ಶುದ್ಧೀಕರಿಸಲ್ಪಟ್ಟಿದ್ದೀರಿ, ದೇವರಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.
ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ
12 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು,” ಆದರೆ ಎಲ್ಲವು ಪ್ರಯೋಜನಕರವಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು” ಆದರೆ ನಾನು ಯಾವುದಕ್ಕೂ ಅಧೀನನಲ್ಲ.
13 “ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ” ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. ಕರ್ತನಿಗೋಸ್ಕರ ಇರುವುದಾಗಿದೆ. ಕರ್ತನು ದೇಹಕೋಸ್ಕರ ಒದಗಿಸಿಕೊಡುತ್ತಾನೆ.
14 ದೇವರು ಕರ್ತನನ್ನು ತನ್ನ ಶಕ್ತಿಯಿಂದ ಪುನರುತ್ಥಾನಗೊಳಿಸಿದ ಹಾಗೆಯೇ ನಮ್ಮನ್ನೂ ತನ್ನ ಶಕ್ತಿಯಿಂದ ಎಬ್ಬಿಸುವನು.
15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು
16 ವೇಶ್ಯೆಯೊಂದಿಗೆ ಸೇರಿಕೊಂಡವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬುದು ನಿಮಗೆ ತಿಳಿಯದೋ? “ಇಬ್ಬರು ಒಂದೇ ಶರೀರವಾಗಿರುವರೆಂದು” ದೇವರವಾಕ್ಯ ಹೇಳುತ್ತದಲ್ಲಾ.
17 ಆದರೆ ಕರ್ತನೊಂದಿಗೆ ಸೇರಿಕೊಂಡವನು ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ.
18 ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಿವೆ”, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
19 ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ?
20 ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.