32
ದೈವಪುರುಷನೊಂದಿಗೆ ಯಾಕೋಬನ ಹೋರಾಟ
ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು. ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೇನಾನಿವೇಶ” ಎಂದು ಹೇಳಿ ಆ ಸ್ಥಳಕ್ಕೆ “*ಮಹನಯಿಮ್” ಎಂದು ಹೆಸರಿಟ್ಟನು.
ಬಳಿಕ ಯಾಕೋಬನು ತನಗಿಂತ ಮೊದಲು ಎದೋಮ್ಯರ ಪ್ರದೇಶವಾಗಿರುವ ಸೇಯೀರ್ ಸೀಮೆಗೆ ತನ್ನ ಅಣ್ಣನಾದ ಏಸಾವನ ಬಳಿಗೆ ಸೇವಕರನ್ನು ಕಳುಹಿಸಿದನು. ಕಳುಹಿಸುವಾಗ ಅವರಿಗೆ “ನೀವು ನನ್ನ ಪ್ರಭುವಾದ ಏಸಾವನ ಬಳಿಗೆ ಹೋಗಿ ಅವನಿಗೆ, ‘ನಿನ್ನ ಸೇವಕನಾದ ಯಾಕೋಬನು ಇಷ್ಟು ದಿನ ಲಾಬಾನನ ಬಳಿಯಲ್ಲಿ ವಾಸವಾಗಿದ್ದನು ಈಗ ಅವನಿಗೆ ಎತ್ತು, ಕತ್ತೆ ಮುಂತಾದ ಪಶುಗಳ ಹಿಂಡುಗಳೂ ದಾಸದಾಸಿಯರು ಇದ್ದಾರೆ. ಅವನು ತಮ್ಮ ದಯೆ ಆತನ ಮೇಲೆ ಇರಬೇಕೆಂದು ತಿಳಿಸುವುದಕ್ಕೆ ನಿಮ್ಮನ್ನು ಕಳುಹಿಸಿದ್ದಾನೆ’ ” ಎಂದು ಹೇಳಿರಿ ಅಂದನು.
ತರುವಾಯ ಆ ಸೇವಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಹತ್ತಿರಕ್ಕೆ ಹೋಗಿ ಬಂದಿದ್ದೇವೆ, ಅವನು ನಾನೂರು ಜನರ ಸಮೇತ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ” ಎಂದು ಹೇಳಿದಾಗ,
ಯಾಕೋಬನಿಗೆ ಬಹು ಭಯವೂ ಕಳವಳವೂ ಉಂಟಾದವು. ಅವನು ತನ್ನೊಂದಿಗಿದ್ದ ಜನರನ್ನು, ಕುರಿದನಗಳನ್ನು ಹಾಗೂ ಒಂಟೆಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿದನು. ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ಬಿದ್ದರೂ ಮತ್ತೊಂದು ಗುಂಪು ತಪ್ಪಿಸಿಕೊಂಡು ಹೋಗಬಹುದು” ಅಂದುಕೊಂಡನು.
ಇದಲ್ಲದೆ ಯಾಕೋಬನು ದೇವರನ್ನು ಪ್ರಾರ್ಥಿಸಿ, “ಯೆಹೋವನೇ, ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ‘ನಿನ್ನ ಸ್ವದೇಶಕ್ಕೂ, ಬಂಧುಗಳ ಬಳಿಗೂ ತಿರುಗಿ ಹೋಗಬೇಕೆಂದು ನನಗೆ ಆಜ್ಞಾಪಿಸಿ ನಿನಗೆ ಒಳ್ಳೆಯದನ್ನು ಮಾಡುವೆನೆಂದು’ ನನಗೆ ವಾಗ್ದಾನ ಮಾಡಿದ ಯೆಹೋವನೇ, 10 ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ನಂಬಿಕೆಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಯೋಗ್ಯನು. ನಾನು ಮೊದಲು ಈ ಯೊರ್ದನ್ ನದಿಯನ್ನು ದಾಟಿದಾಗ ನನ್ನ ಬಳಿಯಲ್ಲಿ ಒಂದು ಕೋಲು ಮಾತ್ರವೇ ಇತ್ತು. ಈಗ ಎರಡು ಗುಂಪುಗಳಿಗೆ ಒಡೆಯನಾಗಿದ್ದೇನೆ. 11 ನನ್ನ ಅಣ್ಣನಾದ ಏಸಾವನು ಬಂದು ನನ್ನನ್ನೂ, ನನ್ನ ಮಕ್ಕಳನ್ನೂ, ಅವರ ತಾಯಿಯರನ್ನೂ ಕೊಂದುಹಾಕುವನೋ ಎಂದು ನನಗೆ ಭಯವಿದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ, 12 ‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡಿ, ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿ ಮಾಡುವೆನೆಂದು ನೀನು ನನಗೆ ಹೇಳಿದ್ದೀಯಲ್ಲಾ?’ ” ಎಂದನು.
13 ಯಾಕೋಬನು ಆ ರಾತ್ರಿ ಅಲ್ಲೇ ತಂಗಿದನು. ತಾನು ತಂದದ್ದರಲ್ಲಿ ಕೆಲವನ್ನು ಸಹೋದರನಾದ ಏಸಾವನಿಗೆ ಕಾಣಿಕೆಯಾಗಿ ತೆಗೆದುಕೊಂಡನು. 14 ಇನ್ನೂರು ಆಡುಕುರಿ, ಇಪ್ಪತ್ತು ಹೋತ, ಇಪ್ಪತ್ತು ಟಗರು, ಮರಿಯೊಡನೆ ಹಾಲು ಕರೆಯುವ 15 ಮೂವತ್ತು ಒಂಟೆ, ನಲ್ವತ್ತು ಆಕಳು, ಹತ್ತು ಹೋರಿ ಇಪ್ಪತ್ತು ಹೆಣ್ಣುಕತ್ತೆ, ಹತ್ತು ಗಂಡುಕತ್ತೆ ಇವುಗಳನ್ನು ತೆಗೆದುಕೊಂಡನು. 16 ಇವುಗಳಲ್ಲಿ ಪ್ರತಿಯೊಂದು ಹಿಂಡನ್ನು ತನ್ನ ಸೇವಕನಿಗೆ ಒಪ್ಪಿಸಿ, “ನೀವು ನನಗಿಂತ ಮುಂಚಿತವಾಗಿ ನದಿಯನ್ನು ದಾಟಿ ಹೋಗಿರಿ ಮತ್ತು ಪ್ರತಿ ಹಿಂಡು ಹಿಂಡಿಗೂ ಮಧ್ಯದಲ್ಲಿ ಅಂತರವಿರಲಿ” ಎಂದನು.
17 ಮೊದಲನೆಯ ಹಿಂಡಿನ ಮೇಲ್ವಿಚಾರಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಸೇವಕನು? ಎಲ್ಲಿಗೆ ಹೋಗುತ್ತೀ? ನಿನ್ನ ಮುಂದೆ ಇರುವ ಇವೆಲ್ಲಾ ಯಾರದು?’ ” ಎಂದು ಕೇಳಿದರೆ, 18 ಆಗ ನೀನು, “ಇವು ನಿಮ್ಮ ಸೇವಕನಾದ ಯಾಕೋಬನದು. ತನ್ನ ಪ್ರಭುಗಳಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾನೆ. ಅವನೂ ನಮ್ಮ ಹಿಂದೆ ಬರುತ್ತಿದ್ದಾನೆ” ಎಂದು ಉತ್ತರಕೊಡಬೇಕು ಎಂಬುದಾಗಿ ಅಪ್ಪಣೆಕೊಟ್ಟನು.
19 ಹಾಗೆಯೇ ಎರಡನೆಯವನಿಗೂ ಮೂರನೆಯವನಿಗೂ ಹಿಂಡುಗಳ ಹಿಂದೆ ಹೋದವರೆಲ್ಲರಿಗೂ, “ನೀವು ಏಸಾವನನ್ನು ನೋಡುವಾಗ ಇದೇ ರೀತಿಯಾಗಿ ಹೇಳಬೇಕು. ನಿನ್ನ ಸೇವಕನಾದ ಯಾಕೋಬನೇ ನಮ್ಮ ಹಿಂದೆ ಬರುತ್ತಿದ್ದಾನೆ ಎನ್ನಿರಿ” ಎಂದು ಅಪ್ಪಣೆಕೊಟ್ಟನು. 20 ಯಾಕೋಬನು ತನ್ನೊಳಗೆ, “ನನ್ನ ಮುಂದೆ ಹೋಗುವ ಈ ಕಾಣಿಕೆಯಿಂದ ಏಸಾವನನ್ನು ಸಮಾಧಾನಪಡಿಸುವೆನು. ಆಮೇಲೆ ಅವನನ್ನು ಸಂಧಿಸುವಾಗ, ಒಂದು ವೇಳೆ ನನ್ನನ್ನು ಪ್ರೀತಿಯಿಂದ ಸ್ವೀಕರಿಸುವನೇನೋ” ಎಂದುಕೊಂಡನು. 21 ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟು ಹೋಯಿತು. ತಾನು ಆ ರಾತ್ರಿ ತನ್ನ ಪಾಳೆಯದಲ್ಲೇ ಉಳಿದುಕೊಂಡನು.
22 ಆ ರಾತ್ರಿ ಅವನು ತನ್ನ ಇಬ್ಬರು ಹೆಂಡತಿಯರನ್ನು, ಇಬ್ಬರು ದಾಸಿಯರನ್ನು ಹಾಗೂ ಹನ್ನೊಂದು ಮಂದಿ ಮಕ್ಕಳನ್ನು ಕರೆದುಕೊಂಡು ಯಬ್ಬೋಕ್ ಹೊಳೆಯನ್ನು ದಾಟಿದನು. 23 ಅವರನ್ನೂ, ತನ್ನ ಆಸ್ತಿಯೆಲ್ಲವನ್ನೂ ದಾಟಿಸಿದ ಮೇಲೆ 24 ಯಾಕೋಬನು ಒಂಟಿಯಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. 25 ಆ ಪುರುಷನು ತಾನು ಗೆಲ್ಲದೆ ಇರುವುದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು. 26 ಆ ಪುರುಷನು, “ನನ್ನನ್ನು ಬಿಡು, ಬೆಳಗಾಗುತ್ತಿದೆ” ಎನ್ನಲು, ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡುವುದಿಲ್ಲ” ಎಂದನು.
27 ಆ ಪುರುಷನು, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಅವನು, “ಯಾಕೋಬನು” ಎಂದಾಗ,
28 ಅವನು ಯಾಕೋಬನಿಗೆ, “ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಲ್ಪಡುವುದಿಲ್ಲ; ನೀನು ದೇವರ ಸಂಗಡಲೂ, ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದುದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರಾಗುವುದು” ಎಂದು ಹೇಳಿದನು.
29 ಯಾಕೋಬನು, “ನೀನು ನಿನ್ನ ಹೆಸರನ್ನು ನನಗೆ ತಿಳಿಸಬೇಕು” ಎಂದು ಅವನನ್ನು ಕೇಳಿಕೊಂಡಾಗ ಆತನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು.
30 ಆಗ ಯಾಕೋಬನು, “ನಾನು ದೇವರನ್ನು ಪ್ರತ್ಯಕ್ಷವಾಗಿ ನೋಡಿದೆನಲ್ಲಾ; ಆದರೂ ನನ್ನ ಪ್ರಾಣ ಉಳಿದಿದೆ” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು,
31 ಅವನು, ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು. ಆದರೆ ಯಾಕೋಬನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು. 32 ಆ ಪುರುಷನು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಾಯೇಲ್ಯರು ಇಂದಿನ ವರೆಗೂ ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವುದಿಲ್ಲ.
* 32:2 32:2 ಮಹನಯಿಮ್ ಅಂದರೆ ಸುತ್ತವರೆದ ಸೈನ್ಯ. 32:30 32:30 ಪೆನೀಯೇಲ್ ಅಂದರೆ ದೇವರ ಮುಖ.