೩೩
ಯಾಕೋಬನು ಏಸಾವನನ್ನು ಸಂಧಿಸಿದ್ದು
೧ ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಜನರ ಸಮೇತ ಬರುವುದನ್ನು ಕಂಡನು.ಆಗ ಅವನು ಲೇಯಳಿಗೂ ರಾಹೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ ಅವರನ್ನು ಬೇರೆ ಬೇರೆ ಮಾಡಿ ೨ ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ ಕಡೆಯಲ್ಲಿ ರಾಹೇಲಳನ್ನೂ ಯೋಸೇಫನನ್ನೂ ನಿಲ್ಲಿಸಿದನು. ೩ ತಾನೇ ಅವರ ಮುಂದಾಗಿ ಹೋಗಿ ತನ್ನ ಅಣ್ಣನು ಹತ್ತಿರ ಸಮೀಪಿಸುತ್ತಿರುವಾಗ ಏಳು ಸಾರಿ ನೆಲದವರೆಗೆ ತಲೆಬಾಗಿ ನಮಸ್ಕರಿಸಿದನು.
೪ ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಅತ್ತರು. ೫ ತರುವಾಯ ಏಸಾವನು ಕಣ್ಣೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ಕಂಡು, “ನಿನ್ನ ಜೊತೆಯಲ್ಲಿರುವ ಜನರು ಯಾರು?” ಎಂದು ಕೇಳಲು ಯಾಕೋಬನು ಅವನಿಗೆ, “ದೇವರು ನಿನ್ನ ಸೇವಕನಿಗೆ ಕೃಪೆಯಿಂದ ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು” ಎಂದು ಹೇಳಿದನು.
೬ ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರಕ್ಕೆ ಬಂದು ಅಡ್ಡಬಿದ್ದರು. ೭ ಆ ಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು. ಕೊನೆಗೆ ಯೋಸೇಫನೂ ರಾಹೇಲಳೂ ಬಂದು ಅಡ್ಡಬಿದ್ದರು.
೮ ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪಶುಗಳು ಯಾತಕ್ಕೆ?” ಎಂದು ಕೇಳಲು ಯಾಕೋಬನು, “ಸ್ವಾಮಿಯವರ ದಯೆ ನನಗೆ ದೊರಕಬೇಕೆಂದು ನಾನು ತಮಗೆ ಅವುಗಳನ್ನು ಕಳುಹಿಸಿಕೊಟ್ಟೆನು” ಎಂದನು.
೯ ಏಸಾವನು ಅದಕ್ಕೆ, “ತಮ್ಮನೇ, ನನಗೆ ಬೇಕಾದಷ್ಟು ಆಸ್ತಿಯುಂಟು, ನಿನ್ನದು ನಿನಗೇ ಇರಲಿ” ಎನ್ನಲು
೧೦ ಯಾಕೋಬನು, “ಹಾಗಲ್ಲ, ನಿನಗೆ ನನ್ನ ಮೇಲೆ ದಯೆಯಿದ್ದರೆ, ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಬೇಕು. ನಿನ್ನನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು, ನನ್ನನ್ನು ಪ್ರೀತಿಯಿಂದ ಅಂಗೀಕರಿಸಿದ್ದೇ ವಿಶೇಷ ಸಂಗತಿಯಾಗಿದೆ. ೧೧ ದೇವರು ನನಗೆ ಕೃಪೆಯನ್ನು ತೋರಿದ್ದರಿಂದ ನನಗೆ ಸಮೃದ್ಧಿಯುಂಟಾಯಿತು. ಆದಕಾರಣ ನಾನು ಸಮರ್ಪಿಸುವ ಉಡುಗೊರೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು” ಎಂದು ಹೇಳಿ ಏಸಾವನನ್ನು ಬಲವಂತ ಮಾಡಿದ್ದರಿಂದ ಅವನು ಆ ಉಡುಗೊರೆಯನ್ನು ತೆಗೆದುಕೊಂಡನು.
೧೨ ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ಮುಂದಾಗಿ ಹೋಗುತ್ತೇನೆ” ಎಂದನು.
೧೩ ಅದಕ್ಕೆ ಯಾಕೋಬನು, “ನನ್ನ ಮಕ್ಕಳು ಎಳೇ ಪ್ರಾಯದವರು ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ಪ್ರಭುವಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಆಡುಕುರಿಗಳ ಹಿಂಡುಗಳೆಲ್ಲವೂ ಸತ್ತು ಹೋದಾವು. ೧೪ ತಾವು ದಯವಿಟ್ಟು ಸೇವಕನಿಗಿಂತಲೂ ಮುಂಚೆ ಹೋಗಬಹುದು ನಾನು ನನ್ನ ಮುಂದಿರುವ ಆಡುಕುರಿಗಳ ನಡಿಗೆಗೂ ಮಕ್ಕಳ ಶಕ್ತಿಗೂ ಸರಿಯಾಗಿ ಮೆಲ್ಲಮೆಲ್ಲನೆ ನಡೆದು ನನ್ನ ಪ್ರಭುವಿನ ಸೀಮೆಯಾಗಿರುವ ಸೇಯಿರಿಗೆ ಬರುತ್ತೇನೆ” ಎಂದನು.
೧೫ ಏಸಾವನು, “ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟು ಹೋಗುತ್ತೇನೆ” ಎನ್ನಲು ಯಾಕೋಬನು, “ಅದರ ಅಗತ್ಯವೇನು? ಒಡೆಯನೇ, ತಮ್ಮ ದಯೆ ನನ್ನ ಮೇಲಿದ್ದರೆ ಸಾಕು” ಎಂದು ಹೇಳಿದನು.
೧೬ ಹೀಗೆ ಏಸಾವನು ಆ ದಿನವೇ ಸೇಯಿರ್ ಸೀಮೆಗೆ ಹೊರಟುಹೋದನು. ೧೭ ಯಾಕೋಬನು ಪ್ರಯಾಣಮಾಡಿ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ದನಗಳಿಗೆ ಆಶ್ರಯವನ್ನೂ ಮಾಡಿಸಿದನು. ಆದುದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.
೧೮ ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸುರಕ್ಷಿತವಾಗಿ ಸೇರಿದನು. ಆ ಊರಿನ ಬಳಿಯಲ್ಲಿ ತನ್ನ ಗುಡಾರಗಳನ್ನು ಹಾಕಿಸಿಕೊಂಡನು. ೧೯ ಅವನು ತನ್ನ ಗುಡಾರಗಳನ್ನು ಹಾಕಿಸಿದ ಭೂಮಿಯನ್ನು ಹಮೋರನ ಮಕ್ಕಳಿಗೆ ನೂರು ನಾಣ್ಯ ಕೊಟ್ಟು ಅವರಿಂದ ಕೊಂಡುಕೊಂಡನು. ಹಮೋರನು ಶೆಕೆಮನ ತಂದೆ. ೨೦ ಅಲ್ಲಿ ಯಾಕೋಬನು ಯೆಹೋವನ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ “ಏಲ್ ಎಲೋಹೆ ಇಸ್ರಾಯೇಲ್” ಎಂದು ಹೆಸರಿಟ್ಟನು.