18
ಕುಂಬಾರ ಮತ್ತು ಜೇಡಿಮಣ್ಣು
1 ಯೆಹೋವನು ಯೆರೆಮೀಯನಿಗೆ,
2 “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು; ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುವೆನು” ಎಂಬ ಮಾತನ್ನು ದಯಪಾಲಿಸಿದನು.
3 ಆಗ ನಾನು ಕುಂಬಾರನ ಮನೆಗೆ ಇಳಿದು ಹೋದೆನು; ಇಗೋ, ಅವನು ಚಕ್ರದ ಮೇಲೆ ತನ್ನ ಕೆಲಸವನ್ನು ನಡೆಸುತ್ತಿದ್ದನು.
4 ಆ ಕುಂಬಾರನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಪಾತ್ರೆಯು ಅವನ ಕೈಯಲ್ಲಿ ಕೆಟ್ಟುಹೋಗಲು ಅವನು ಪುನಃ ತನಗೆ ಸರಿತೋಚಿದ ಹಾಗೆ ಅದನ್ನು ಹೊಸ ಪಾತ್ರೆಯನ್ನಾಗಿ ಮಾಡಿದನು.
5 ಆಗ ಯೆಹೋವನು ನನಗೆ ಈ ಮಾತನ್ನು ಅನುಗ್ರಹಿಸಿದನು,
6 “ಯೆಹೋವನು ಹೀಗೆನ್ನುತ್ತಾನೆ, ಇಸ್ರಾಯೇಲ್ ವಂಶದವರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಬಾರದೋ? ಇಸ್ರಾಯೇಲ್ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ, ನೀವು ನನ್ನ ಕೈಯಲ್ಲಿದ್ದೀರಿ.
7 ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ಕಿತ್ತು, ಕೆಡವಿ ನಾಶಪಡಿಸಬೇಕೆಂದು ಅಪ್ಪಣೆಕೊಟ್ಟಾಗ,
8 ನಾನು ದಂಡನೆಯನ್ನು ನಿರ್ಣಯಿಸಿದ ಆ ಜನಾಂಗದವರು ತಮ್ಮ ಕೆಟ್ಟತನದಿಂದ ತಿರುಗಿಕೊಂಡರೆ, ನಾನು ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.
9 ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ನೆಟ್ಟು ಕಟ್ಟಬೇಕೆಂದು ಅಪ್ಪಣೆಕೊಟ್ಟಾಗ,
10 ಅದು ನನ್ನ ಮಾತನ್ನು ಕೇಳದೆ, ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದರೆ ನಾನು ಮನಸ್ಸನ್ನು ಬದಲಾಯಿಸಿಕೊಂಡು ಅದಕ್ಕೆ ಮಾಡಬೇಕೆಂದಿದ್ದ ಮೇಲನ್ನು ಮಾಡದೆ ಇರುವೆನು.
11 ಈಗ ನೀನು ಯೆಹೂದ್ಯರಿಗೂ ಯೆರೂಸಲೇಮಿನವರಿಗೂ ಯೆಹೋವನು ಹೀಗೆನ್ನುತ್ತಾನೆ, ‘ಆಹಾ, ನಾನು ನಿಮ್ಮ ವಿರುದ್ಧವಾಗಿ ಯೋಚಿಸಿ, ಕೇಡನ್ನು ಕಲ್ಪಿಸುತ್ತಿದ್ದೇನೆ; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ದುರ್ಮಾರ್ಗದಿಂದ ಹಿಂದಿರುಗಲಿ, ನಡತೆಯನ್ನೂ ಕೃತ್ಯಗಳನ್ನೂ ಸರಿಪಡಿಸಿಕೊಳ್ಳಲಿ’ ಎಂಬ ಮಾತನ್ನು ಹೇಳು.
12 ಅವರೋ, ‘ಏನೂ ನಿರೀಕ್ಷೆಯಿಲ್ಲ; ನಮ್ಮ ಆಲೋಚನೆಗಳಿಗೆ ತಕ್ಕಂತೆ ನಡೆಯುವೆವು, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ನಮ್ಮ ದುಷ್ಟ ಹೃದಯದ ಹಾಗೆ ಮಾಡುವೆವು’ ಎಂದು ಹೇಳುತ್ತಾರೆ.”
13 ಹೀಗಿರಲು ಯೆಹೋವನು ಹೀಗೆನ್ನುತ್ತಾನೆ, “ಜನಾಂಗಗಳಲ್ಲಿ ವಿಚಾರಿಸಿರಿ, ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ?
ಇಸ್ರಾಯೇಲೆಂಬ ಯುವತಿಯು ಕೇವಲ ಅಸಹ್ಯಕಾರ್ಯವನ್ನು ಮಾಡಿದ್ದಾಳೆ.
14 ಲೆಬನೋನಿನ ಹಿಮವು ಅರಣ್ಯದ ಶಿಖರದಿಂದ ತಪ್ಪುವುದೇ? ದೂರದಿಂದ ಇಳಿದು ಹರಿಯುವ ತೊರೆಯ ನೀರು ಬತ್ತುವುದೇ?
15 ನನ್ನ ಜನರೋ ನನ್ನನ್ನು ಮರೆತು ವ್ಯರ್ಥ ವಿಗ್ರಹಗಳಿಗೆ ಧೂಪಹಾಕಿದ್ದಾರಲ್ಲಾ;
ಅವು ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರು ಮುಗ್ಗರಿಸುವಂತೆಯೂ,
ಸರಿಯಲ್ಲದ ಸೀಳು ದಾರಿಗಳಲ್ಲಿ ಅಲೆಯುವಂತೆಯೂ ಮಾಡಿವೆ.
16 ಆದಕಾರಣ ಬೆರಗಿನ ಸಿಳ್ಳಿಗೆ ಅವರ ದೇಶವು ನಿತ್ಯ ಗುರಿಯಾಗುವುದು;
ಹಾದುಹೋಗುವವರೆಲ್ಲರೂ ಬೆರಗಾಗಿ ತಲೆದೂಗುವರು.
17 ಶತ್ರುಗಳು ಮೇಲೆ ಬಿದ್ದಾಗ ನನ್ನ ಜನರನ್ನು ಮೂಡಣ ಗಾಳಿಯಿಂದಲೋ ಎಂಬಂತೆ ದಿಕ್ಕಾಪಾಲು ಮಾಡುವೆನು.
ಅವರ ವಿಪತ್ತಿನ ದಿನದಲ್ಲಿ ಅವರ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡುವೆನು.”
ಜನರ ಒಳಸಂಚು ಪ್ರವಾದಿಯ ಪ್ರಾರ್ಥನೆ
18 ಆಗ ಅವರು, “ಯೆರೆಮೀಯನ ವಿರುದ್ಧವಾಗಿ ಒಳಸಂಚು ಮಾಡೋಣ ಬನ್ನಿರಿ;
ಧರ್ಮೋಪದೇಶವು ಯಾಜಕನಿಂದ, ಮಂತ್ರಾಲೋಚನೆಯು ಜ್ಞಾನಿಯಿಂದ, ದೈವೋಕ್ತಿಯು ಪ್ರವಾದಿಯಿಂದ ಬಂದ ವಿಷಯ ಎಂದಿಗೂ ತಪ್ಪದು.
ಬನ್ನಿರಿ, ಅವನನ್ನು ಬಾಯಿಂದ ಬಡಿಯೋಣ, ಅವನ ಯಾವ ಮಾತಿಗೂ ಕಿವಿಗೊಡದಿರುವ” ಎಂದುಕೊಂಡರು.
19 ಯೆಹೋವನೇ, ನನ್ನ ಕಡೆಗೆ ಕಿವಿಗೊಡು, ನನ್ನೊಡನೆ ವ್ಯಾಜ್ಯವಾಡುವವರ ಮಾತನ್ನು ಕೇಳು.
20 ಒಳ್ಳೆಯದನ್ನು ಮಾಡಿದ್ದಕ್ಕೆ ಕೇಡಿನ ಪ್ರತಿಫಲ ಅಗತ್ಯವೇ? ನನ್ನ ಪ್ರಾಣವನ್ನು ಹಿಡಿಯಬೇಕೆಂದು ಗುಂಡಿಯನ್ನು ತೋಡಿದ್ದಾರಲ್ಲಾ.
ಅವರ ಮೇಲಣ ನಿನ್ನ ರೋಷವನ್ನು ತಪ್ಪಿಸಲು ನಾನು ನಿನ್ನ ಮುಂದೆ ನಿಂತುಕೊಂಡು ಅವರ ಹಿತಕ್ಕಾಗಿ ವಿಜ್ಞಾಪಿಸಿಕೊಂಡದ್ದನ್ನು ನೆನಪಿಗೆ ತಂದುಕೋ.
21 ಆದಕಾರಣ ಅವರ ಮಕ್ಕಳನ್ನು ಕ್ಷಾಮಕ್ಕೆ ಗುರಿಮಾಡಿ, ಕತ್ತಿಯ ಬಾಯಿಗೆ ಒಪ್ಪಿಸು;
ಅವರ ಹೆಂಡತಿಯರು ಮಕ್ಕಳ್ಳಿಲ್ಲದವರಾಗಿಯೂ, ವಿಧವೆಯರಾಗಿಯೂ ಇರಲಿ;
ಮೃತ್ಯುವು ಅವರ ಗಂಡಂದಿರನ್ನು ಸಂಹರಿಸಲಿ.
ಯುದ್ಧದಲ್ಲಿ ಖಡ್ಗವು ಅವರ ಯುವಕರನ್ನು ವಧಿಸಲಿ.
22 ಸುಲಿಗೆಯವರ ಗುಂಪನ್ನು ಫಕ್ಕನೆ ಅವರ ಮೇಲೆ ಬೀಳಮಾಡು, ಅವರ ಮನೆಗಳೊಳಗಿಂದ ಅರಚಾಟವು ಕೇಳಿಸಲಿ.
ಅವರು ನನ್ನನ್ನು ಹಿಡಿಯಲಿಕ್ಕೆ ಗುಂಡಿಯನ್ನು ತೋಡಿ, ನನ್ನ ಕಾಲುಗಳಿಗೆ ಪಾಶಗಳನ್ನು ಗುಪ್ತವಾಗಿ ಒಡ್ಡಿದ್ದಾರೆ.
23 ಯೆಹೋವನೇ, ನನ್ನನ್ನು ಕೊಲ್ಲಬೇಕೆಂದು ಅವರು ಮಾಡಿಕೊಂಡಿರುವ ಆಲೋಚನೆಯನ್ನೆಲ್ಲಾ ನೀನೇ ಬಲ್ಲೆ.
ಅವರ ಅಪರಾಧವನ್ನು ಕ್ಷಮಿಸಬೇಡ, ಅವರ ಪಾಪವನ್ನು ಅಳಿಸದಿರು, ಅದು ನಿನ್ನ ಕಣ್ಣೆದುರಿಗಿರಲಿ.
ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪವನ್ನು ವ್ಯಕ್ತಪಡಿಸುವಾಗ ಅವರಿಗೆ ತಕ್ಕದ್ದನ್ನು ಮಾಡು.