ಮಣ್ಣಿನ ಮಡಿಕೆಯ ಸಾಮ್ಯ
೧೯
೧ ಯೆಹೋವನು ನನಗೆ ಹೀಗೆ ಹೇಳಿದನು, “ಹೊರಡು, ಕುಂಬಾರನು ಮಾಡಿದ ಮಣ್ಣಿನ ಮಡಿಕೆಯನ್ನು ಕೊಂಡುಕೊಂಡು, ಜನರ ಹಿರಿಯರಲ್ಲಿಯೂ ಮತ್ತು ಯಾಜಕರ ಹಿರಿಯರಲ್ಲಿಯೂ ಕೆಲವರನ್ನು ಆರಿಸಿಕೋ. ೨ ನೀನು ಬೋಕಿಯ ಬಾಗಿಲಿನ ಸಮೀಪದಲ್ಲಿರುವ ಬೆನ್ ಹಿನ್ನೋಮ್ ತಗ್ಗಿಗೆ ಹೋಗಿ, ನಾನು ನಿನಗೆ ತಿಳಿಸುವ ಮಾತುಗಳನ್ನು ಸಾರು. ೩ ನೀನು ಅವರಿಗೆ, ‘ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವನ ಮಾತನ್ನು ಕೇಳಿರಿ! ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುವೆನು; ಅದರ ಸುದ್ದಿಯನ್ನು ಕೇಳುವವರ ಎರಡು ಕಿವಿಗಳೂ ಗಿರುಗುಟ್ಟುವವು.
೪ “ ‘ಈ ಜನರು ನನ್ನನ್ನು ತೊರೆದು ತಮಗಾಗಲಿ, ತಮ್ಮ ಪಿತೃಗಳಿಗಾಗಲಿ ಅಥವಾ ಯೆಹೂದದ ಅರಸರಿಗಾಗಲಿ ತಿಳಿಯದ ಅನ್ಯದೇವತೆಗಳಿಗೆ ಧೂಪಹಾಕುತ್ತಾ, ಈ ಸ್ಥಳವನ್ನು ಅನ್ಯಸ್ಥಾನವನ್ನಾಗಿ ಮಾಡಿದ್ದಾರೆ. ೫ ಅವರು ಅದನ್ನು ನಿರ್ದೋಷಿಗಳ ರಕ್ತದಿಂದ ತುಂಬಿಸಿ, ತಮ್ಮ ಮಕ್ಕಳನ್ನು ಬಾಳ್ ದೇವತೆಗೆ ಆಹುತಿ ಕೊಡುವುದಕ್ಕೆ ಬಾಳನ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡಿದ್ದಾರಲ್ಲಾ. ನಾನು ಇಂಥಾ ಆಚಾರವನ್ನು ವಿಧಿಸಲಿಲ್ಲ, ಅದರ ಮಾತನ್ನೇ ಆಡಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ. ೬ ಆಹಾ, ಈ ಕಾರಣದಿಂದ ಈ ಸ್ಥಳಕ್ಕೆ ತೋಫೆತ್ ಮತ್ತು ಬೆನ್ ಹಿನ್ನೋಮಿನ ತಗ್ಗು ಎಂಬ ಹೆಸರುಗಳು ಹೋಗಿ ಕೊಲೆಯ ತಗ್ಗು ಎಂಬ ಹೆಸರಾಗುವ ಕಾಲ ಬರುವುದು. ೭ ನಾನು ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಯೆರೂಸಲೇಮಿನವರ ಆಲೋಚನೆಯನ್ನು ಮಣ್ಣುಪಾಲುಮಾಡಿ, ಅವರ ಪ್ರಾಣವನ್ನು ಹುಡುಕುವ ಶತ್ರುಗಳ ಖಡ್ಗದಿಂದ ಅವರನ್ನು ಬೀಳಿಸಿ, ಆ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವನ್ನಾಗಿ ಮಾಡುವೆನು. ೮ ನಾನು ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು. ೯ ಅವರು ತಮ್ಮ ಗಂಡು ಹೆಣ್ಣು ಮಕ್ಕಳ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಅವರ ಪ್ರಾಣವನ್ನು ಹುಡುಕುವ ಶತ್ರುಗಳು ಅವರನ್ನು ಮುತ್ತಿ, ಸಂಕಟಕ್ಕೆ ಗುರಿಮಾಡುವಾಗ, ಅವರು ತಮ್ಮ ಇಷ್ಟ ಮಿತ್ರರ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಇದು ಯೆಹೋವನಾದ ನನ್ನ ನುಡಿ.’ ”
೧೦ ಆಗ ನೀನು ನಿನ್ನ ಸಂಗಡ ಬಂದವರ ಕಣ್ಣೆದುರಿಗೆ ಆ ಮಡಿಕೆಯನ್ನು ಒಡೆದುಬಿಟ್ಟು ಅವರಿಗೆ ಹೀಗೆ ಹೇಳು, ೧೧ “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಕುಂಬಾರನು ಒಡೆದು ಸರಿಪಡಿಸಲಾಗದ ಮಣ್ಣಿನ ಪಾತ್ರೆಯಂತೆ ನಾನು ಈ ಜನವನ್ನು ಮತ್ತು ಪಟ್ಟಣವನ್ನು ಒಡೆದುಬಿಡುವೆನು; ಇನ್ನೆಲ್ಲಿಯೂ ಸ್ಥಳವಿಲ್ಲವಾಗಿ ಶವಗಳನ್ನು ತೋಫೆತಿನಲ್ಲಿ ಹೂಣುವರು. ೧೨ ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಹೀಗೆ ನಾಶಪಡಿಸಿ, ಈ ಪಟ್ಟಣವನ್ನು ತೋಫೆತಿನ ಸ್ಥಿತಿಗೆ ತರುವೆನು. ೧೩ ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ಅಂದರೆ ಯಾವ ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ, ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ, ಆ ಮನೆಗಳೆಲ್ಲಾ ಹೊಲಸಾಗಿ ತೋಫೆತ್ ಎಂಬ ಸ್ಥಳಕ್ಕೆ ಸಮಾನವಾಗುವವು.’ ”
ಪಷ್ಹೂರನು ಯೆರೆಮೀಯನನ್ನು ಕೋಳಕ್ಕೆ ಹಾಕಿಸಿದ್ದು
೧೪ ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಯೆಹೋವನ ಆಲಯದ ಪ್ರಾಕಾರದಲ್ಲಿ ನಿಂತುಕೊಂಡು, ೧೫ “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ಈ ಪಟ್ಟಣದವರೂ ಮತ್ತು ಇದರ ಸುತ್ತಣ ಎಲ್ಲಾ ಊರುಗಳವರೂ ನನ್ನ ಮಾತುಗಳನ್ನೂ ಕೇಳದೆ, ತಮ್ಮ ಮನಸ್ಸನ್ನು ಕಠಿಣಮಾಡಿಕೊಂಡ ಕಾರಣ, ನಾನು ಈ ಪಟ್ಟಣಕ್ಕೆ ಕೊಟ್ಟ ಶಾಪದ ಕೇಡನ್ನೆಲ್ಲಾ ಇವರಿಗೆ ಬರಮಾಡುವೆನು” ಎಂದು ಸಮಸ್ತ ಜನರಿಗೆ ಸಾರಿದನು.