6
ಯೇಸುವಿನ ಸ್ವಂತ ಊರಿನವರು ಆತನನ್ನು ತಾತ್ಸಾರಮಾಡಿದ್ದು
ಮತ್ತಾ 13:54-58; ಲೂಕ 4:15-30
ಯೇಸು ಅಲ್ಲಿಂದ ಹೊರಟು ತನ್ನ ಊರಿಗೆ ಬಂದನು; ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು. ಸಬ್ಬತ್ ದಿನ ಬಂದಾಗ ಆತನು ಅಲ್ಲಿಯ ಸಭಾಮಂದಿರದಲ್ಲಿ ಉಪದೇಶಮಾಡತೊಡಗಿದನು. ಅಲ್ಲಿ ನೆರದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಈತನಿಗೆ ಈ ಬೋಧನೆಯ ಮಾತುಗಳು ಎಲ್ಲಿಂದ ಬಂದಿತು? ಈತನು ಪಡೆದಿರುವ ಜ್ಞಾನವಾದರೂ ಎಂಥದ್ದು? ಈತನ ಕೈಯಿಂದ ಇಂತಹ ಅದ್ಭುತಕಾರ್ಯಗಳು ಆಗುವುದಾದರು ಹೇಗೆ? ಈತನು ಆ ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ, ಸೀಮೋನ ಇವರ ಅಣ್ಣನಲ್ಲವೇ? ಈತನ ತಂಗಿಯರು ಇಲ್ಲಿ ನಮ್ಮಲ್ಲಿಯೇ ಇದ್ದಾರಲ್ಲವೇ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. ಯೇಸು ಅವರಿಗೆ, “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು; ಆದರೆ ಸ್ವಂತ ದೇಶದಲ್ಲಿಯೂ, ಸ್ವಂತ ಜನರಲ್ಲಿಯೂ, ಸ್ವಂತ ಮನೆಯಲ್ಲಿಯೂ ಗೌರವವಿಲ್ಲ” ಎಂದು ಹೇಳಿದನು. ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವುದಕ್ಕಾಗಲಿಲ್ಲ. ಅವರ ಅಪನಂಬಿಕೆಗೆ ಆತನು ಆಶ್ಚರ್ಯಪಟ್ಟನು. ಆ ನಂತರ ಯೇಸು ಸುತ್ತಮುತ್ತಲಿನ ಊರುಗಳಲ್ಲಿ ಬೋಧಿಸಿದನು.
ಯೇಸು ಸುವಾರ್ತೆ ಸಾರುವುದಕ್ಕೆ ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಮತ್ತಾ 9:35-10:14; ಲೂಕ 9:1-6
ತಾನು ಆಯ್ಕೆಮಾಡಿಕೊಂಡ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. ಕಳುಹಿಸುವಾಗ ಆತನು ಅವರಿಗೆ ದೆವ್ವಗಳ ಮೇಲೆ ಅಧಿಕಾರ ಕೊಟ್ಟು, “ಕೋಲು ಹೊರತು ಪ್ರಯಾಣಕ್ಕೆ ಏನೂ ತೆಗೆದುಕೊಂಡು ಹೋಗಬೇಡಿರಿ; ಬುತ್ತಿ, ಚೀಲ, ಸೊಂಟಪಟ್ಟಿಯಲ್ಲಿ ಹಣ ಬೇಡ. ಚಪ್ಪಲಿಗಳನ್ನು ಹಾಕಿಕೊಳ್ಳಬಹುದು, ಆದರೆ ಎರಡು ಅಂಗಿಗಳನ್ನು ಧರಿಸಬೇಡಿರಿ” ಎಂದು ಅಪ್ಪಣೆಕೊಟ್ಟನು. 10 ಇದಲ್ಲದೆ ಆತನು ಅವರಿಗೆ, “ನೀವು ಎಲ್ಲಿಯಾದರೂ ಒಂದು ಮನೆಗೆ ಹೋದಾಗ ಆ ಸ್ಥಳದಿಂದ ಹೊರಡುವವರೆಗೂ ಅಲ್ಲೇ ಉಳಿದುಕೊಳ್ಳಿರಿ. 11  ಮತ್ತು ಯಾವ ಸ್ಥಳದವರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನೀವು ಹೇಳುವುದನ್ನು ಕೇಳದೆಯೂ ಹೋದರೆ ಆ ಸ್ಥಳದಿಂದ ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಎಂದು ಹೇಳಿದನು. 12 ಅವರು ಹೊರಟು ಹೋಗಿ ಜನರಿಗೆ, “ನೀವು ನಿಮ್ಮ ಪಾಪಗಳನ್ನು ಬಿಟ್ಟು ಮಾನಸಾಂತರ ಹೊಂದಬೇಕು” ಎಂದು ಸಾರಿ ಹೇಳಿದರು. 13 ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಗುಣಪಡಿಸಿದರು.
ಸ್ನಾನಿಕನಾದ ಯೋಹಾನನ ಶಿರಚ್ಛೇದನ
ಮತ್ತಾ 14:1-12; ಲೂಕ 9:7-9; 3:19,20
14 ಅಷ್ಟರಲ್ಲಿ ಅರಸನಾದ ಹೆರೋದನು ಯೇಸುವಿನ ಹೆಸರು ಪ್ರಸಿದ್ಧಿಗೆ ಬಂದಿರುವ ವಿಷಯ ಕೇಳಿದನು ಮತ್ತು ಜನರು ಆತನ ವಿಷಯದಲ್ಲಿ, “ಸ್ನಾನಿಕನಾದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ; ಆದುದರಿಂದ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿ ಈತನಲ್ಲಿ ಇದೆ” ಎಂದು ಹೇಳುತ್ತಿದ್ದರು. 15 ಕೆಲವರು, “ಇವನು ಎಲೀಯನೆಂತಲೂ” ಮತ್ತೆ ಕೆಲವರು, “ಇವನು ಪ್ರಾಚೀನ ಕಾಲದ ಪ್ರವಾದಿಗಳಂತಿರುವ ಒಬ್ಬ ಪ್ರವಾದಿಯೆಂತಲೂ” ಹೇಳಿದರು. 16 ಆದರೆ ಹೆರೋದನು ಆತನ ಸುದ್ದಿಯನ್ನು ಕೇಳಿ, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ” ಎಂದು ಹೇಳಿದನು.
17 ಹೆರೋದನು ತಾನೇ ಕಳುಹಿಸಿ ಯೋಹಾನನನ್ನು ಹಿಡಿದು ಬಂಧಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳ ನಿಮಿತ್ತ ಹಾಗೆ ಮಾಡಿದ್ದನು; ಏಕೆಂದರೆ ಅವನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಮದುವೆಯಾಗಿದ್ದನು. 18 ಇದರ ನಿಮಿತ್ತ ಯೋಹಾನನು ಹೆರೋದನಿಗೆ, “ನಿನ್ನ ಅಣ್ಣನ ಹೆಂಡತಿಯು ಆತನು ಬದುಕಿರುವಾಗಲೇ ನಿನ್ನವಳ್ಳಾಗಿರುವುದು ಅಧರ್ಮವಲ್ಲವೇ” ಎಂದು ಹೇಳುತ್ತಿದ್ದನು. 19 ಇದರಿಂದ ಹೆರೋದ್ಯಳು ಸಹ ಯೋಹಾನನ ಮೇಲೆ ದ್ವೇಷವಿಟ್ಟುಕೊಂಡು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಸಾಧ್ಯವಾಗಲಿಲ್ಲ. 20 ಏಕೆಂದರೆ ಹೆರೋದನು ಯೋಹಾನನನ್ನು ನೀತಿವಂತನೆಂದೂ ಪರಿಶುದ್ಧನೆಂದೂ ತಿಳಿದು ಭಯಪಟ್ಟು ಅವನಿಗೆ ಯಾವ ಅಪಾಯವೂ ಬಾರದಂತೆ ಕಾಪಾಡಿದ್ದನು. ಇದಲ್ಲದೆ ಯೋಹಾನನು ಹೇಳುತ್ತಿದ್ದ ಸಂದೇಶವನ್ನು ಅವನು ಕೇಳಿದಾಗ ಮನಸ್ಸಿನಲ್ಲಿ ಅಸಮಾಧಾನ ಉಂಟಾದರೂ ಅವನ ಮಾತನ್ನು ಸಂತೋಷದಿಂದ ಕೇಳುತ್ತಿದ್ದನು.
21 ಆದರೆ ಹೆರೋದ್ಯಳಿಗೆ ಅನುಕೂಲವಾದ ದಿನ ಬಂದಿತು; ಹೇಗೆಂದರೆ ಹೆರೋದನು ತನ್ನ ಜನ್ಮದಿನದಂದು ಪ್ರಭುಗಳಿಗೂ, ಸಹಸ್ರಾಧಿಪತಿಗಳಿಗೂ, ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಏರ್ಪಡಿಸಿದಾಗ, 22 ಹೆರೋದ್ಯಳ ಮಗಳು ಒಳಕ್ಕೆ ಬಂದು ನಾಟ್ಯವಾಡಿ ಹೆರೋದನನ್ನೂ ಅವನ ಸಂಗಡ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಅತಿಥಿಗಳನ್ನೂ ಮೆಚ್ಚಿಸಿದಳು. ಅರಸನು ಆ ಹುಡುಗಿಗೆ, “ನಿನಗೆ ಬೇಕಾದದ್ದನ್ನು ಕೇಳಿಕೋ, ಕೊಡುತ್ತೇನೆ. 23 ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿದರೂ, ನಿನಗೆ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು. 24 ಆಗ ಅವಳು ಹೊರಕ್ಕೆ ಹೋಗಿ, “ನಾನು ಏನು ಕೇಳಿಕೊಳ್ಳಲಿ?” ಎಂದು ತನ್ನ ತಾಯಿಯನ್ನು ಕೇಳಲಾಗಿ ಅವಳು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ” ಅಂದಳು. 25 ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು, “ಈ ಕ್ಷಣದಲ್ಲೇ ಸ್ನಾನಿಕನಾದ ಯೋಹಾನನ ತಲೆಯನ್ನು *ಪರಾತಿನಲ್ಲಿ ನನಗೆ ತರಿಸಿಕೊಡಬೇಕು, ಇದೇ ನನ್ನ ಬೇಡಿಕೆ” ಎಂದು ಕೇಳಿಕೊಂಡಳು. 26 ಅದಕ್ಕೆ ಅರಸನಿಗೆ ಬಹು ದುಃಖವಾಯಿತು. ಅದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. 27 ಕೂಡಲೆ ತನ್ನ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನಿಗೆ, ನೀನು ಹೋಗಿ ಯೋಹಾನನ ತಲೆಯನ್ನು ತಂದುಕೊಡು ಎಂದು ಅಪ್ಪಣೆಕೊಟ್ಟು ಕಳುಹಿಸಿದನು; 28 ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಕಡಿದು ಒಂದು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟನು. ಆ ಹುಡುಗಿ ಅದನ್ನು ತನ್ನ ತಾಯಿಗೆ ಕೊಟ್ಟಳು. 29 ಯೋಹಾನನ ಶಿಷ್ಯರು ಈ ಸಂಗತಿಗಳನ್ನು ಕೇಳಿ ಅವರು ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು.
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
ಮತ್ತಾ 14:13-36; ಲೂಕ 9:10-17; ಯೋಹಾ 6:1-21
30  ಅಪೊಸ್ತಲರು ಯೇಸುವಿನ ಬಳಿಗೆ ಕೂಡಿ ಬಂದು ತಾವು ಮಾಡಿದ್ದನ್ನೂ ಉಪದೇಶಿಸಿದ್ದನ್ನೂ ಆತನಿಗೆ ತಿಳಿಸಿದರು. 31 ಆತನು ಅವರಿಗೆ, “ನೀವು ಮಾತ್ರ ಏಕಾಂತ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ” ಎಂದು ಹೇಳಿದನು. ಏಕೆಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ. 32 ಆಗ ಅವರು ತಾವಾಗಿಯೇ ದೋಣಿಯಲ್ಲಿ ಹೊರಟು ಏಕಾಂತ ಸ್ಥಳಕ್ಕೆ ಹೋದರು. 33 ಆದರೆ ಅವರು ಹೋಗುವುದನ್ನು ಬಹು ಜನರು ನೋಡಿ ಅವರನ್ನು ಗುರುತಿಸಿ ಎಲ್ಲಾ ಊರುಗಳಿಂದ ಕಾಲುನಡಿಗೆಯಾಗಿ ಓಡಿ ಅವರಿಗಿಂತ ಮೊದಲೇ ಅಲ್ಲಿ ಸೇರಿದರು. 34 ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದನು. 35 ಅಷ್ಟರಲ್ಲಿ ಸಂಜೆ ಆಗಿದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು, “ಇದು ನಿರ್ಜನ ಸ್ಥಳ, ಈಗ ಹೊತ್ತು ಬಹಳವಾಯಿತು; 36 ಈ ಜನರಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮ್ಮ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ” ಎಂದು ಹೇಳಿದರು. 37 ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿರಿ” ಎಂದು ಉತ್ತರಕೊಟ್ಟನು. ಅದಕ್ಕವರು, “ನಾವು ಹೋಗಿ ಇನ್ನೂರು ದಿನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟ ಕೊಡಬೇಕೋ?” ಎಂದು ಹೇಳಲು 38 ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಅಂದನು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ” ಅಂದರು. 39 ಆಗ ಆತನು ಅವರಿಗೆ, ಎಲ್ಲರೂ ಹಸಿರುಹುಲ್ಲಿನ ಮೇಲೆ §ಪಂಕ್ತಿಪಂಕ್ತಿಯಾಗಿ ಕುಳಿತುಕೊಳ್ಳಲಿ ಎಂದು ಅಪ್ಪಣೆಕೊಟ್ಟಾಗ, 40 ಜನರು ಪಂಕ್ತಿಗೆ ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕುಳಿತುಕೊಂಡರು. 41 ಆ ಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ ದೇವರಿಗೆ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು ಇದನ್ನು ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟನು, ಅದೇ ರೀತಿಯಲ್ಲಿ ಆ ಎರಡು ಮೀನುಗಳನ್ನೂ ಆತನು ಎಲ್ಲರಿಗೂ ಹಂಚಿಸಿದನು. 42 ಅವರೆಲ್ಲರೂ ತೃಪ್ತರಾಗುವವರೆಗೂ ಊಟಮಾಡಿದರು. 43 ರೊಟ್ಟಿಯ ತುಂಡುಗಳನ್ನೂ ಮೀನಿನ ತುಂಡುಗಳನ್ನೂ ಕೂಡಿಸಲಾಗಿ ಹನ್ನೆರಡು ಪುಟ್ಟಿಗಳು ತುಂಬಿದವು. 44 ಊಟಮಾಡಿದವರು ಐದು ಸಾವಿರ ಮಂದಿ ಗಂಡಸರು.
ಯೇಸು ನೀರಿನ ಮೇಲೆ ನಡೆದದ್ದು
45 ಇದಾದ ಕೂಡಲೆ ಯೇಸು ತನ್ನ ಶಿಷ್ಯರಿಗೆ, ನಾನು ಈ ಜನರ ಗುಂಪನ್ನು ಕಳುಹಿಸಿ ಬಿಡುವಷ್ಟರೊಳಗೆ ನೀವು ದೋಣಿಯನ್ನ ಹತ್ತಿ ಮುಂದಾಗಿ ಆಚೇದಡಕ್ಕೆ ಬೇತ್ಸಾಯಿದಕ್ಕೆ ಹೋಗಿರಿ ಎಂದು ಬಲವಂತಮಾಡಿದನು. 46 ಆತನು ಜನರನ್ನು ಕಳುಹಿಸಿಕೊಟ್ಟ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು.
47 ಸಂಜೆಯಾದಾಗ ದೋಣಿಯು ಸಮುದ್ರದ ನಡುವೆ ಇತ್ತು; ಯೇಸು ಒಬ್ಬನೇ ದಡದಲ್ಲಿದ್ದನು. 48 ಎದುರು ಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಗೋಲು ಹಾಕಿ ದಣಿದು ಹೋದದ್ದನ್ನು ಯೇಸು ಕಂಡು ಹೆಚ್ಚುಕಡಿಮೆ ರಾತ್ರಿಯ *ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು. 49 ಆದರೆ ಸಮುದ್ರದ ಮೇಲೆ ನಡೆಯುವ ಆತನನ್ನು ಅವರು ಕಂಡು ಭೂತವೆಂದು ಭಾವಿಸಿ ಅಬ್ಬರಿಸಿ ಕೂಗಿದರು; ಏಕೆಂದರೆ ಅವರೆಲ್ಲರೂ ಆತನನ್ನು ನೋಡಿ ಭಯಭೀತರಾಗಿದ್ದರು. 50 ಕೂಡಲೆ ಆತನು ಅವರನ್ನು ಮಾತನಾಡಿಸಿ ಅವರಿಗೆ, “ಧೈರ್ಯವಾಗಿರಿ, ನಾನೇ, ಹೆದರಬೇಡಿರಿ” ಎಂದು ಹೇಳಿದನು. 51 ತರುವಾಯ ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬರಲು ಆ ಬಿರುಗಾಳಿಯು ನಿಂತುಹೋಯಿತು. ಆಗ ಅವರು ತಮ್ಮೊಳಗೆ ಬಹು ಆಶ್ಚರ್ಯಪಟ್ಟರು. 52  ಏಕೆಂದರೆ ಅವರು ರೊಟ್ಟಿಯ ವಿಷಯವಾದ ಮಹತ್ಕಾರ್ಯವನ್ನು ಗ್ರಹಿಸಿರಲಿಲ್ಲ; ಅವರ ಹೃದಯವು ಕಠಿಣವಾಗಿತ್ತು.
53 ಅವರು ಸಮುದ್ರವನ್ನು ದಾಟಿ ಗೆನೆಜರೇತ್ ಪ್ರದೇಶದ ದಡಕ್ಕೆ ಮುಟ್ಟಿ ದೋಣಿಯನ್ನು ಕಟ್ಟಿದರು. 54 ಅವರು ದೋಣಿಯಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುವಿನ ಗುರುತು ಹಿಡಿದು, 55 ಆ ಸೀಮೆಯಲ್ಲೆಲ್ಲಾ ಓಡಾಡಿ ರೋಗಿಯಾಗಿದ್ದವರನ್ನು ದೋಲಿಯ ಮೇಲೆ ಹಾಕಿಕೊಂಡು ಆತನು ಎಲ್ಲಿದ್ದಾನೆಂದು ಕೇಳಿದರೋ ಅಲ್ಲಿಗೆ ತೆಗೆದುಕೊಂಡು ಹೋದರು. 56 ಆತನು ಯಾವ ಗ್ರಾಮಗಳಿಗೆ, ಯಾವ ಊರು ಹಳ್ಳಿಗಳಿಗೆ ಹೋದರೂ ಅಲ್ಲಿಯವರು ರೋಗಿಗಳನ್ನು ತಂದು ಸಂತೆಬೀದಿಗಳಲ್ಲಿ ಇಟ್ಟು, ಆತನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಆತನನ್ನು ಮುಟ್ಟಿದವರೆಲ್ಲರೂ ಗುಣಹೊಂದಿದರು.
* 6:25 6:25 ದೊಡ್ಡ ತಟ್ಟೆ 6:27 6:27 ಕಾವಲುಗಾರ 6:30 6:30 ಮಾರ್ಕ 6:7. § 6:39 6:39 ಅರ್ಥ ಸಾಲುಸಾಲಾಗಿ. * 6:48 6:48 ಸುಮಾರು ಮುಂಜಾನೆ ಮೂರು ಗಂಟೆ. 6:52 6:52 ಮಾರ್ಕ 8:17; ಮತ್ತಾ 16:8,9. 6:55 6:55 ಹಿಡಿಯುಳ್ಳ ಹುಲ್ಲಿನ ಹಾಸಿಗೆ, ಮೆತ್ತಗೆ ಇರುವ ಹಾಸಿಗೆ.