7
ಶುದ್ಧ ಹಾಗೂ ಅಶುದ್ಧ
ಮತ್ತಾ 15:1-20
ತರುವಾಯ ಯೆರೂಸಲೇಮಿನಿಂದ ಬಂದಿದ್ದ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೇಸುವಿನ ಬಳಿಗೆ ಕೂಡಿ ಬಂದರು. ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ ಅಂದರೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು. ಫರಿಸಾಯರೂ ಯೆಹೂದ್ಯರೆಲ್ಲರೂ ಹಿರಿಯರಿಂದ ಬಂದ ಪದ್ಧತಿಯಂತೆ ತಮ್ಮ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಮತ್ತು ಸಂತೆಗೆ ಹೋಗಿ ಬಂದರೆ ನೀರನ್ನು ಪ್ರೋಕ್ಷಿಸಿಕೊಳ್ಳದೆ ಇರುತ್ತಿರಲಿಲ್ಲ. ಬಹು *ಸ್ವಚ್ಛವಾಗಿ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು. ಆದುದರಿಂದ ಫರಿಸಾಯರೂ ಶಾಸ್ತ್ರಿಗಳೂ ಯೇಸುವನ್ನು, “ನಿನ್ನ ಶಿಷ್ಯರು ಹಿರಿಯರ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?” ಎಂದು ಕೇಳಿದರು. ಅದಕ್ಕೆ ಆತನು, “ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ; ಅವನು ಬರೆದಿರುವಂತೆ:
“ ‘ಈ ಜನರು ಮಾತಿನಿಂದ ನನ್ನನ್ನು ಗೌರವಿಸುತ್ತಾರೆ,
ಆದರೆ ಅವರ ಹೃದಯ ನನ್ನಿಂದ ದೂರವಾಗಿದೆ.
ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಉಪದೇಶವನ್ನಾಗಿ ಅವರು ಬೋಧಿಸುವುದರಿಂದ
ನನಗೆ ಆರಾಧನೆ ಮಾಡುವುದು ವ್ಯರ್ಥ’ ಎಂಬುದೇ.
ನೀವು ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ನೇಮಿಸಿದ ಸಂಪ್ರದಾಯಗಳನ್ನು ಬಿಡದೆ ಹಿಡಿದುಕೊಂಡಿದ್ದೀರಿ” ಎಂದು ಹೇಳಿದನು. ಆತನು ಇನ್ನೂ ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ; 10  ‘ನಿನ್ನ§ತಂದೆತಾಯಿಗಳನ್ನು ಗೌರವಿಸಬೇಕು’ ಮತ್ತು*‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ’ ಮೋಶೆಯು ಹೇಳಿದ್ದಾನೆ. 11  ನೀವಾದರೋ ‘ಒಬ್ಬನು ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ನೋಡಿ, ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ಕೊರ್ಬಾನ್ (ಅಂದರೆ ದೇವರಿಗೆ ಮುಡಿಪು) ಮಾಡಿದ್ದೇನೆ’ ಎಂದು ಹೇಳುವುದಾದರೆ 12  ಅವನು ತನ್ನ ತಂದೆಗಾಗಲಿ, ತಾಯಿಗಾಗಲಿ ಇನ್ನೇನೂ ಸಹಾಯ ಮಾಡಬೇಕಾಗಿಲ್ಲ ಎಂದು ಹೇಳುತ್ತೀರಿ. 13  ಹೀಗೆ ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತಿದ್ದೀರಿ, ಮತ್ತು ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ” ಎಂದು ಹೇಳಿದನು.
14 ಆ ಮೇಲೆ ಯೇಸು ಜನರ ಗುಂಪನ್ನು ಪುನಃ ಹತ್ತಿರಕ್ಕೆ ಕರೆದು, “ಎಲ್ಲರೂ ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ ಮತ್ತು ಅರ್ಥ ಮಾಡಿಕೊಳ್ಳಿರಿ. 15  ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದು ಅವನನ್ನು ಮೈಲಿಗೆ ಮಾಡುವುದಿಲ್ಲ; ಆದರೆ ಮನುಷ್ಯನೊಳಗಿನಿಂದ ಹೊರಗೆ ಬರುವಂಥದು ಮನುಷ್ಯನನ್ನು ಮೈಲಿಗೆ ಮಾಡುವಂಥವುಗಳಾಗಿವೆ” ಎಂದು ಹೇಳಿದನು. 16 ಯಾರಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ” ಅಂದನು.
17 ತರುವಾಯ ಆತನು ಜನರನ್ನು ಬಿಟ್ಟು ಮನೆಯೊಳಗೆ ಹೋದಾಗ ಆತನ ಶಿಷ್ಯರು ಆ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಲು 18 ಆತನು ಅವರಿಗೆ, “ನಿಮಗೆ ಇನ್ನೂ ತಿಳಿವಳಿಕೆಯಿಲ್ಲವೇ? ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದು, 19  ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ, ಬಳಿಕ ಹೊರಗೆ ವಿಸರ್ಜಿಸಲ್ಪಡುತ್ತದೆ. ಅವು ಅವನನ್ನು ಅಶುದ್ಧ ಮಾಡಲಾರದೆಂದು ನಿಮಗೆ ಅರ್ಥವಾಗುವುದಿಲ್ಲವೋ?” ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ಆಹಾರ ಪದಾರ್ಥಗಳೆಲ್ಲಾ ಶುದ್ಧವೆಂದು ಯೇಸು ಸೂಚಿಸಿದನು. 20 ಆತನು ಮತ್ತೆ ಹೇಳಿದ್ದೇನೆಂದರೆ, “ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವಂಥವುಗಳೇ ಅವನನ್ನು ಅಶುದ್ಧಗೊಳಿಸುತ್ತವೆ; 21  ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ, 22  ವ್ಯಭಿಚಾರ, ದುರಾಶೆ, ಕೆಡುಕುತನ, ಮೋಸ, ಕಾಮಾಭಿಲಾಷೆ, ಹೊಟ್ಟೆಕಿಚ್ಚು, ಅಪನಿಂದೆ, ಗರ್ವ, ಬುದ್ಧಿಗೇಡಿತನ ಇವೇ ಮೊದಲಾದವುಗಳು ಹೊರಡುತ್ತವೆ. 23  ಈ ಎಲ್ಲಾ ಕೆಡುಕುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧ ಮಾಡುತ್ತವೆ.”
ಯೇಸು ಅನ್ಯಮತಸ್ಥಳ ಮಗಳನ್ನೂ ಸ್ವಸ್ಥಮಾಡಿದ್ದು
ಮತ್ತಾ 15:21-28
24 ಯೇಸು ಅಲ್ಲಿಂದ ಹೊರಟು ತೂರ್ ಪಟ್ಟಣದ ಪ್ರಾಂತ್ಯಗಳಿಗೆ ಹೋಗಿ ಒಂದು ಮನೆಯೊಳಗೆ ಇಳಿದುಕೊಂಡು ಅದು ಯಾರಿಗೂ ತಿಳಿಯಬಾರದೆಂದು ಬಯಸಿದನು; ಆದರೆ ಆತನು ಗುಪ್ತವಾಗಿರುವುದಕ್ಕೆ ಸಾಧ್ಯವಾಗದೆ ಹೋಯಿತು. 25 ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು. 26 ಆ ಹೆಂಗಸು ಸುರೋಪೊಯಿನಿಕ್ಯದಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ಆಕೆಯು ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿಕೊಂಡಾಗ, 27 ಆತನು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಯಾಗಲಿ; ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು. 28 ಆದರೆ ಅದಕ್ಕೆ ಆಕೆಯು, “ಹೌದು ಕರ್ತನೇ, ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ” ಎಂದು ಉತ್ತರಕೊಡಲು 29 ಆತನು, “ಆಕೆಗೆ ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು” ಅಂದನು. 30 ಆಕೆಯು ತನ್ನ ಮನೆಗೆ ಹೋಗಿ ನೋಡಲಾಗಿ ಆ ಹುಡುಗಿಯು ಹಾಸಿಗೆಯ ಮೇಲೆ ಮಲಗಿದ್ದಳು; ದೆವ್ವ ಅವಳನ್ನು ಬಿಟ್ಟು ಹೋಗಿತ್ತು.
ಒಬ್ಬ ಮೂಕನನ್ನೂ ಸ್ವಸ್ಥಪಡಿಸಿದ್ದು
31 ಅನಂತರ ಆತನು ತೂರ್ ಪಟ್ಟಣದ ಪ್ರಾಂತ್ಯಗಳನ್ನು ಬಿಟ್ಟು ಸೀದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿಯ ಪ್ರಾಂತ್ಯಗಳನ್ನು ಹಾದು ಗಲಿಲಾಯ ಸಮುದ್ರದ ದಡಕ್ಕೆ ಬಂದನು. 32 ಆಗ ಕೆಲವರು ತೊದಲು ಮಾತನಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ಕರೆದುಕೊಂಡು ಬಂದು, ಇವನ ಮೇಲೆ ನಿನ್ನ ಕೈಯಿಡಬೇಕು ಎಂದು ಆತನನ್ನು ಬೇಡಿಕೊಂಡರು. 33 ಆತನು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ, ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟನು ಮತ್ತು ಉಗುಳಿ ನಂತರ ಅವನ ನಾಲಿಗೆಯನ್ನು ಮುಟ್ಟಿ, 34 ಆಕಾಶದ ಕಡೆಗೆ ನೋಡಿ ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ, “ಎಪ್ಫಥಾ” ಎಂದು ಹೇಳಿದನು. ಆ ಶಬ್ದಕ್ಕೆ “ತೆರೆಯಲಿ” ಎಂದರ್ಥ. 35 ಹೇಳುತ್ತಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು; ಅವನು ಸ್ಪಷ್ಟವಾಗಿ ಮಾತನಾಡಿದನು. 36 ಆಗ ಆತನು, ಇದನ್ನು ಯಾರಿಗೂ ತಿಳಿಸಬಾರದೆಂದು ಅವರಿಗೆ ಕಟ್ಟಪ್ಪಣೆ ಮಾಡಿದನು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಹೆಚ್ಚಾಗಿ ಅದನ್ನು ಪ್ರಚಾರ ಮಾಡಿದರು. 37  §ಅವರು ಅತ್ಯಂತ ಆಶ್ಚರ್ಯಪಟ್ಟು, “ಆತನು ಎಲ್ಲವನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾನೆ” ಎಂದು ಅಂದುಕೊಂಡರು.
* 7:4 7:4 ಕೆಲವು ಪ್ರತಿಗಳಲ್ಲಿ ಸ್ನಾನಮಾಡು ಎಂದು ಬರೆದಿದೆ. 7:6 7:6 ಯೆಶಾ 29:13 7:9 7:9 ಲೂಕ 7:30; ಯೋಹಾ 12:48: § 7:10 7:10 ವಿಮೋ 20:12: * 7:10 7:10 ವಿಮೋ 21:17: 7:16 7:16 16 ನೆಯ ವಚನವು ಮೂಲಗ್ರಂಥದ ಹೆಚ್ಚು ಪ್ರತಿಗಳಲ್ಲಿ ಇಲ್ಲ. 7:24 7:24 ಪಾಠಾಂತರ: ತೂರ್ ಸೀದೋನ್ ಪಟ್ಟಣಗಳ. § 7:37 7:37 ಮಾರ್ಕ 6:51; 10:26; ಮತ್ತಾ 15:30, 31: