40
ರಕ್ಷಣೆಗಾಗಿ ಪ್ರಾರ್ಥಿಸುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.
ನಾನು ಯೆಹೋವನಿಗಾಗಿ ನಿರೀಕ್ಷಿಸಿಯೇ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು.
ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು;
ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ,
ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
ಆತನು ನನ್ನ ಬಾಯಲ್ಲಿ ನೂತನ ಕೀರ್ತನೆಯನ್ನು ಹುಟ್ಟಿಸಿದ್ದಾನೆ;
ಅದು ನಮ್ಮ ದೇವರ ಸ್ತೋತ್ರವೇ.
ಆತನ ಮಹತ್ಕಾರ್ಯಗಳನ್ನು ನೋಡಿದ ಅನೇಕರು
ಭಯಭಕ್ತಿಯುಳ್ಳವರಾಗಿ ಯೆಹೋವನಲ್ಲಿ ನಂಬಿಕೆಯಿಡುವರು.
ಯಾರು *ಅಹಂಕಾರಿಗಳ ಜೊತೆಯಲ್ಲಿಯೂ,
ಸುಳ್ಳುದೇವರನ್ನು ಹಿಂಬಾಲಿಸುವವರಲ್ಲಿಯೂ ಸೇರದೆ,
ಯೆಹೋವನನ್ನೇ ನಂಬುತ್ತಾನೋ, ಅವನೇ ಧನ್ಯನು.
ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು?
ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ,
ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ;
ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯ;
ಅವು ಅಸಂಖ್ಯಾತವಾಗಿವೆ.
ಯಜ್ಞನೈವೇದ್ಯಗಳು ನಿನಗೆ ಇಷ್ಟವಿಲ್ಲ;
ಸರ್ವಾಂಗಹೋಮಗಳನ್ನಾಗಲಿ, ದೋಷಪರಿಹಾರಕ ಯಜ್ಞಗಳನ್ನಾಗಲಿ ನೀನು ಅಪೇಕ್ಷಿಸಲಿಲ್ಲ.
ಆದರೆ ಶ್ರವಣಶಕ್ತಿಯನ್ನು ನನಗೆ ಅನುಗ್ರಹಿಸಿದಿ.
ಆಗ ನಾನು, “ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರುಳಿಯಲ್ಲಿ ಬರೆದದೆ.
ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು;
ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಅಂದೆನು.
ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು,
ಧಾರಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು;
ಯೆಹೋವನೇ, ನೀನೇ ಬಲ್ಲೆ.
10 ನಿನ್ನ ನೀತಿಸಾಧನೆಯನ್ನು ಮರೆಮಾಡಲಿಲ್ಲ;
ನಿನ್ನ ನಂಬಿಕೆಯನ್ನೂ, ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು;
ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ.
11 ಯೆಹೋವನೇ, ನೀನಂತೂ ನಿನ್ನ ಕರುಣೆಯನ್ನು ನನ್ನಿಂದ ಅಗಲಿಸಬೇಡ;
ನಿನ್ನ ಕೃಪಾಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ.
12 ಏಕೆಂದರೆ ಲೆಕ್ಕವಿಲ್ಲದ ಆಪತ್ತುಗಳು ನನ್ನನ್ನು ಸುತ್ತಿಕೊಂಡಿವೆ;
ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿರುತ್ತವೆ,
ನನಗೆ ದಿಕ್ಕೇ ತೋರುವುದಿಲ್ಲ. ಅವು ನನ್ನ ತಲೆಯ ಕೂದಲುಗಳಿಗಿಂತಲೂ ಹೆಚ್ಚಾಗಿವೆ,
ನಾನು ಎದೆಗುಂದಿ ಹೋದೆನು.
13 ಯೆಹೋವನೇ, ದಯವಿಟ್ಟು ನನ್ನನ್ನು ರಕ್ಷಿಸು;
ಯೆಹೋವನೇ, ಬೇಗನೆ ಬಂದು ಸಹಾಯಮಾಡು.
14 ನನ್ನ ಪ್ರಾಣವನ್ನು ತೆಗೆಯುವುದಕ್ಕೆ ಸಮಯನೋಡುವವರು,
ಆಶಾಭಂಗಪಟ್ಟು ಅವಮಾನಹೊಂದಲಿ;
ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಅಪಮಾನದಿಂದ ಹಿಂದಿರುಗಿ ಓಡಲಿ.
15 ಆಹಾ, ಆಹಾ ಎಂದು ನನ್ನನ್ನು ಪರಿಹಾಸ್ಯಮಾಡುವವರು,
ತಮಗೆ ಆಗುವ ಅವಮಾನದಿಂದ ವಿಸ್ಮಯಗೊಳ್ಳಲಿ.
16 ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ;
ನಿನ್ನ ಜಯದಲ್ಲಿ ಆನಂದಿಸುವವರು, “ಯೆಹೋವನು ಮಹೋನ್ನತನು” ಎಂದು ಯಾವಾಗಲೂ ಹೇಳುವವರಾಗಲಿ.
17 ನಾನಾದರೋ ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ;
ಕರ್ತನೇ ನನ್ನ ಹಿತಚಿಂತಕನು.
ನನ್ನ ದೇವರೇ, ನೀನೇ ನನಗೆ ಸಹಾಯಕನೂ, ರಕ್ಷಕನೂ ಆಗಿದ್ದೀ;
ತಡಮಾಡಬೇಡ.
* 40:4 40:4 ಅಥವಾ ವಿಗ್ರಹಗಳ.