41
ರೋಗ ಮತ್ತು ಶತ್ರುಬಾಧಿತನ ಮೊರೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.
ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು;
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು;
ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು;
ಯೆಹೋವನು ಅವನನ್ನು ಶತ್ರುಗಳ ಅಧೀನಕ್ಕೆ ಕೊಡುವುದಿಲ್ಲ!
ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ,
ಯೆಹೋವನು ಅವನನ್ನು ಉದ್ಧರಿಸುವನು;
ಅವನ ರೋಗವನ್ನೆಲ್ಲಾ ಪರಿಹರಿಸಿ, ಆರೋಗ್ಯವನ್ನು ಅನುಗ್ರಹಿಸಿದ್ದಿಯಲ್ಲಾ ಸ್ವಾಮೀ.
ನಾನಂತೂ, “ಯೆಹೋವನೇ, ನಿನ್ನ ಆಜ್ಞೆಯನ್ನು ಮೀರಿ ಪಾಪಮಾಡಿದ್ದೇನೆ;
ನನ್ನನ್ನು ಕರುಣಿಸಿ ಸ್ವಸ್ಥಮಾಡು” ಅಂದೆನು.
ನನ್ನ ಹಾನಿಯನ್ನು ಅಪೇಕ್ಷಿಸುವ ಶತ್ರುಗಳು, “ಅವನು ಯಾವಾಗ ಸತ್ತಾನು?
ಅವನ ಹೆಸರು ಯಾವಾಗ ಇಲ್ಲದೆ ಹೋದೀತು?” ಎಂದು ಹೇಳಿಕೊಳ್ಳುತ್ತಾರೆ.
ಅವರಲ್ಲೊಬ್ಬನು ನನ್ನನ್ನು ನೋಡುವುದಕ್ಕೆ ಬಂದರೆ ಕಪಟದ ಮಾತನಾಡುವನು;
ಮನಸ್ಸಿನಲ್ಲಿ ಕುಯುಕ್ತಿಗಳನ್ನು ಕಲ್ಪಿಸಿಕೊಂಡು ಹೋಗಿ ಹೊರಗೆ ಪ್ರಕಟಿಸುತ್ತಾನೆ.
ನನ್ನ ಹಗೆಯವರೆಲ್ಲರು ನನಗೆ ವಿರುದ್ಧವಾಗಿ ಕಿವಿಗಳಲ್ಲಿ ಗುಜುಗುಜು ಮಾತನಾಡಿಕೊಳ್ಳುತ್ತಾರೆ;
*ನನಗೆ ಕೇಡುಮಾಡಲು ಪರಸ್ಪರ ಆಲೋಚಿಸುತ್ತಾರೆ.
“ಅವನನ್ನು ಅಸಾಧ್ಯರೋಗ ಹಿಡಿದಿದೆ;
ಅವನು ಹಾಸಿಗೆಯನ್ನು ಬಿಟ್ಟು ತಿರುಗಿ ಏಳುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ.
ನಾನು ಯಾರನ್ನು ನಂಬಿದ್ದೆನೋ,
ಯಾರು ನನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನೋ,
ಅಂತಹ ಆಪ್ತಸ್ನೇಹಿತನು ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.
10 ಯೆಹೋವನೇ, ನೀನಾದರೋ ಕರುಣಿಸಿ ನನ್ನನ್ನು ಏಳುವಂತೆ ಮಾಡು;
ಆಗ ನಾನು ಅವರಿಗೆ ಮುಯ್ಯಿತೀರಿಸುವೆನು.
11 ಶತ್ರುಗಳ ಜಯಧ್ವನಿ ಇಲ್ಲದ್ದರಿಂದಲೇ
ನಿನ್ನ ಒಲುಮೆ ನನಗುಂಟೆಂದು ತಿಳಿದುಕೊಳ್ಳುವೆನು.
12 ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರಮಾಡಿ,
ನಿನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ನಿಲ್ಲಿಸುವಿ.
13 ಇಸ್ರಾಯೇಲರ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ. ಆಮೆನ್. ಆಮೆನ್.
* 41:7 41:7 ಅಥವಾ ನನಗೆ ಕೇಡನ್ನು ಕಲ್ಪಿಸುತ್ತಾರೆ.