3
ಯೆರೂಸಲೇಮಿನ ಹಾಗೂ ಯೆಹೂದದ ಮೇಲೆ ನ್ಯಾಯತೀರ್ಪು
1 ಇಗೋ, ಕರ್ತನೂ ಸರ್ವಶಕ್ತನೂ ಆಗಿರುವ
ಯೆಹೋವ ದೇವರೆಂಬ ನಾನು
ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ
ಯೆರೂಸಲೇಮಿನಿಂದಲೂ ಯೆಹೂದದಿಂದಲೂ ತೆಗೆದುಬಿಡುವೆನು.
2 ಇದಲ್ಲದೆ ಶೂರ, ಯುದ್ಧಭಟ,
ನ್ಯಾಯಾಧಿಪತಿ, ಪ್ರವಾದಿ,
ಶಕುನದವನು, ಹಿರಿಯನು,
3 ಸೇನಾಪತಿ, ಅಧಿಕಾರಿ, ಆಲೋಚನಾಪರನು, ತಾಂತ್ರಿಕನು
ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರನ್ನೆಲ್ಲಾ ತೆಗೆದುಬಿಡುವೆನು.
4 “ಬಾಲಕರನ್ನು ಅವರ ಪ್ರಭುಗಳನ್ನಾಗಿ ಮಾಡಿ,
ಮಕ್ಕಳು ಅವರ ಮೇಲೆ ಆಳುವಂತೆ ಮಾಡುವೆನು.”
5 ಮನುಷ್ಯನಿಗೆ ವಿರೋಧವಾಗಿ ಮನುಷ್ಯನು,
ನೆರೆಯವನಿಗೆ ವಿರೋಧವಾಗಿ ನೆರೆಯವನು ಹಿಂಸಿಸುವನು.
ಹುಡುಗನು ವೃದ್ಧನ ವಿರೋಧವಾಗಿಯೂ,
ನೀಚನು ಘನವಂತನ ವಿರೋಧವಾಗಿಯೂ ಸೊಕ್ಕಿನಿಂದ ವರ್ತಿಸುವರು.
6 ಒಬ್ಬನು ತನ್ನ ಸಹೋದರನನ್ನು
ತಂದೆಯ ಮನೆಯಲ್ಲಿ ಹಿಡಿದು ಹೀಗೆ ಹೇಳುವನು,
“ನಿನಗೆ ವಸ್ತ್ರವಿದೆ, ನಮ್ಮನ್ನು ನೀನು ಆಳುವವನಾಗು
ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ.”
7 ಆ ದಿನದಲ್ಲಿ ಅವನು ಆಣೆಯಿಟ್ಟು,
“ನಾನು ಉಪಶಮನ ಮಾಡುವವನಾಗುವುದಿಲ್ಲ.
ಏಕೆಂದರೆ ನನ್ನ ಮನೆಯಲ್ಲಿ ಅನ್ನವಾಗಲಿ, ವಸ್ತ್ರವಾಗಲಿ ಇಲ್ಲ;
ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ,” ಎಂದು ಉತ್ತರಿಸುವನು.
8 ಏಕೆಂದರೆ ಯೆರೂಸಲೇಮು ಹಾಳಾಗಿದೆ,
ಯೆಹೂದವು ಬಿದ್ದುಹೋಗಿದೆ.
ಅವರ ನಡೆನುಡಿಗಳು ಯೆಹೋವ ದೇವರಿಗೆ ವಿರುದ್ಧವಾಗಿ
ದೇವರ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತಾರೆ.
9 ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ.
ತಮ್ಮ ಪಾಪವನ್ನು ಸೊದೋಮಿನಂತೆ
ಮರೆಮಾಡದೆ ಪ್ರಕಟ ಮಾಡುತ್ತಾರೆ.
ಅವರಿಗೆ ಕಷ್ಟ!
ಏಕೆಂದರೆ ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
10 ನೀತಿವಂತರಿಗೆ ನೀವು, “ಅವರಿಗೆ ಒಳ್ಳೆಯದಾಗಲಿ!” ಎಂದು ಹೇಳಿರಿ.
ಏಕೆಂದರೆ ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
11 ಕೆಡುಕರಿಗೆ ಕಷ್ಟ!
ಅವರಿಗೆ ಕೇಡೇ ಇರಲಿ.
ಏಕೆಂದರೆ ಅವರ ಕೈಗಳ ಪ್ರತಿಫಲವು
ಅವರಿಗೆ ಕೊಡಲಾಗುವುದು.
12 ನನ್ನ ಪ್ರಜೆಗಳನ್ನು ಹುಡುಗರು ಬಾಧಿಸುವರು.
ಸ್ತ್ರೀಯರು ಅವರನ್ನು ಆಳುವರು.
ನನ್ನ ಪ್ರಜೆಗಳೇ, ನಿಮ್ಮನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ.
ನೀವು ನಡೆಯುವ ದಾರಿಯನ್ನು ಹಾಳು ಮಾಡಿದ್ದಾರೆ.
13 ನ್ಯಾಯಾಧೀಶರನ್ನು ಯೆಹೋವ ದೇವರು ಸ್ವಾಧೀನಪಡಿಸಿಕೊಂಡಿದ್ದಾರೆ;
ಅವರು ಜನರನ್ನು ನಿರ್ಣಯಿಸಲು ಎದ್ದರು.
14 ಯೆಹೋವ ದೇವರು ತಮ್ಮ ಪ್ರಜೆಗಳ ಹಿರಿಯರ ಸಂಗಡ,
ಮತ್ತು ಅವರ ಅಧಿಪತಿಗಳ ಸಂಗಡ ನ್ಯಾಯತೀರಿಸಲು ಪ್ರವೇಶಿಸುವರು.
ಏಕೆಂದರೆ, “ನೀವು ನನ್ನ ದ್ರಾಕ್ಷಿತೋಟವನ್ನು ತಿಂದುಬಿಟ್ಟಿದ್ದೀರಿ.
ಬಡವರಿಂದ ಕೊಳ್ಳೆ ಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.
15 ನೀವು ನನ್ನ ಪ್ರಜೆಯನ್ನು ಹೊಡೆದು, ಚೂರುಗಳನ್ನಾಗಿ ಮಾಡಿ,
ಬಡವರ ಮುಖಗಳನ್ನು ಹಿಂಡುವುದರ ಅರ್ಥವೇನು?”
ಎಂದು ಸರ್ವಶಕ್ತ ದೇವರಾದ ಯೆಹೋವ ದೇವರು ವಾದಿಸುತ್ತಾರೆ.
16 ಇದಲ್ಲದೆ ಯೆಹೋವ ದೇವರು ಇಂತೆನ್ನುತ್ತಾರೆ:
“ಚೀಯೋನ್ ಪುತ್ರಿಯರು ಅಹಂಕಾರಿಗಳಾಗಿದ್ದು,
ಕತ್ತು ತೂಗುತ್ತಾ,
ಕಣ್ಣುಗಳನ್ನು ತಿರುಗಿಸುತ್ತಾ,
ನಾಜೂಕಿನಿಂದ ಹೆಜ್ಜೆ ಇಡುತ್ತಾ,
ಕಾಲುಗೆಜ್ಜೆ ಜಣಜಣಿಸುತ್ತಾ ನಡೆಯುತ್ತಾರೆ;
17 ಆದ್ದರಿಂದ ಯೆಹೋವ ದೇವರು ಚೀಯೋನ್ ಪುತ್ರಿಯರ ನಡುನೆತ್ತಿಗೆ ಹುಣ್ಣನ್ನು ಅನುಮತಿಸಿ,
ಅವರನ್ನು ಬೋಳುಮಾಡುವರು.”
18 ಆ ದಿನದಲ್ಲಿ ಯೆಹೋವ ದೇವರು ಅವರ ಕಾಲಂದಿಗೆ, ತುರುಬು ಬಲೆ, ಅರ್ಧಚಂದ್ರ,
19 ಜುಮಕಿ, ಬಳೆ, ಕುಲಾವಿ, ಶಿರವಸ್ತ್ರ,
20 ಕಂಠ ವಸ್ತ್ರ, ಕಾಲ ಸರಪಣಿ, ಡಾಬು, ಸುಗಂಧ ಭರಣಿ, ತಾಯಿತಿ,
21 ಮುದ್ರೆ ಉಂಗುರ, ಮೂಗುತಿ,
22 ಹಬ್ಬದ ಉಡಿಗೆ ತೊಡಿಗೆ, ಮೇಲಂಗಿ, ಶಾಲು, ಕೈಚೀಲ,
23 ಕೈಗನ್ನಡಿ, ನಾರುಮಡಿ, ಮುಡಿ ಮುಕುಟ, ಮೇಲ್ವಸ್ತ್ರ ಈ ಸೊಗಸು ಭೂಷಣಗಳನ್ನೆಲ್ಲಾ ತೆಗೆದುಹಾಕುವರು.
24 ಆಗ ಸುವಾಸನೆಯ ಬದಲಾಗಿ ದುರ್ವಾಸನೆ,
ನಡುಪಟ್ಟಿಗೆ ಬದಲಾಗಿ ಹಗ್ಗ,
ಜಡೆಯ ಬದಲಾಗಿ ಬೋಳುತಲೆ,
ರೇಷ್ಮೆಬಟ್ಟೆಗೆ ಬದಲಾಗಿ ಗೋಣಿತಟ್ಟು,
ಸೌಂದರ್ಯಕ್ಕೆ ಬದಲಾಗಿ ಬರೆ, ಇವೆಲ್ಲ ಅವರಿಗೆ ಬಂದೊದಗುವುದು.
25 ನಿನ್ನ ಗಂಡಸರು ಖಡ್ಗಕ್ಕೆ ತುತ್ತಾಗುವರು.
ನಿನ್ನ ಶೂರರು ಯುದ್ಧದಲ್ಲಿ ಬೀಳುವರು.
26 ಚೀಯೋನ್ ಬಾಗಿಲುಗಳಲ್ಲಿ ಪ್ರಲಾಪವು, ದುಃಖವು ತುಂಬಿರುವುದು.
ಅವಳು ನಿರ್ಗತಿಕಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.