4
1 ಆ ದಿವಸದಲ್ಲಿ ಏಳುಮಂದಿ ಹೆಂಗಸರು
ಒಬ್ಬ ಮನುಷ್ಯನನ್ನು ಹಿಡಿದು,
“ನಾವು ಸ್ವಂತವಾಗಿ ದುಡಿದು ಉಣ್ಣುವೆವು,
ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು,
ನಮ್ಮ ನಿಂದೆಯನ್ನು ನೀಗಿಸುವುದಕ್ಕೆ
ನಿನ್ನ ಹೆಸರು ನಮಗಿದ್ದರೆ ಸಾಕು,”
ಎಂದು ಕೇಳಿಕೊಳ್ಳುವರು.
ಯೆಹೋವ ದೇವರ ಕೊಂಬೆ
2 ಆ ದಿನದಲ್ಲಿ ಯೆಹೋವ ದೇವರ ಕೊಂಬೆಯು ಸುಂದರವಾಗಿಯೂ, ಮಹಿಮೆಯುಳ್ಳದ್ದಾಗಿಯೂ ಇರುವುದು. ಭೂಮಿಯ ಫಲವು ಇಸ್ರಾಯೇಲರಲ್ಲಿ ಉಳಿದವರಿಗೆ ಅಭಿಮಾನವೂ, ರಮ್ಯವಾಗಿಯೂ ಇರುವುದು.
3 ಹೀಗಿರುವಲ್ಲಿ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಹಾಗೂ ಯೆರೂಸಲೇಮಿನಲ್ಲಿ ವಾಸಿಸುವವರೆಂದೂ ದಾಖಲೆಗೊಂಡ ಪ್ರತಿಯೊಬ್ಬರೂ ಪವಿತ್ರರು ಎಂದು ಕರೆಯಲಾಗುವರು.
4 ಯೆಹೋವ ದೇವರು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಪುತ್ರಿಯರ ಕಲ್ಮಷವನ್ನು ತೊಳೆದು, ಯೆರೂಸಲೇಮಿನ ಮೇಲಿನ ರಕ್ತದ ಕಲೆಗಳನ್ನು ತೆಗೆದುಹಾಕುವರು.
5 ಆಗ ಯೆಹೋವ ದೇವರು ಚೀಯೋನ್ ಪರ್ವತದ ಪ್ರತಿಯೊಂದು ನಿವಾಸದ ಮೇಲೂ, ಅದರ ಸಭೆಗಳ ಮೇಲೂ, ಹಗಲಿನಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಿನಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ಏಕೆಂದರೆ ದೇವರ ಮಹಿಮೆ ಎಲ್ಲದರ ಮೇಲೆ ಚಪ್ಪರದಂತೆಯೂ ಆವರಿಸುವುದು.
6 ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ, ಬಿರುಗಾಳಿಗೂ, ಮಳೆಗೂ ಆಶ್ರಯವನ್ನು ಕೊಡುವ ಮಂಟಪವಾಗಿ ಇರುವುದು.