13
ಅಧಿಕಾರಿಗಳಿಗೆ ಅಧೀನನಾಗಿರುವುದು
ಪ್ರತಿಯೊಬ್ಬನೂ ಮೇಲಧಿಕಾರಿಗಳಿಗೆ ಅಧೀನನಾಗಿರಬೇಕು, ಏಕೆಂದರೆ ದೇವರು ನೇಮಿಸಿದ ಅಧಿಕಾರದ ಹೊರತು ಬೇರೆ ಯಾವದೂ ಇರುವುದಿಲ್ಲ. ಇರುವ ಅಧಿಕಾರಗಳು ದೇವರಿಂದಲೇ ನೇಮಕಗೊಂಡಿವೆ. ಆದ್ದರಿಂದ ಅಧಿಕಾರಕ್ಕೆ ಎದುರು ಬೀಳುವವನು ದೇವರ ನೇಮಕವನ್ನು ಎದುರಿಸುವವನಾಗಿರುತ್ತಾನೆ. ಹಾಗೆ ಎದುರಿಸುವವರು ತೀರ್ಪಿಗೆ ಗುರಿಯಾಗುವರು. ಕೆಟ್ಟದ್ದನ್ನು ಮಾಡುವವನಿಗೆ ಅಧಿಪತಿಗಳ ಭಯವಿರುವುದೇ ಹೊರತು, ಒಳ್ಳೆಯದನ್ನು ಮಾಡುವವನಿಗೆ ಅಲ್ಲ. ಅಧಿಕಾರಿಗಳಿಗೆ ಭಯಪಡಬಾರದೇ? ಒಳ್ಳೆಯದನ್ನು ಮಾಡು. ಅದರಿಂದ ನಿನಗೆ ಪ್ರಶಂಸೆ ದೊರಕುವುದು. ಏಕೆಂದರೆ, ಅವನು ನಿನಗೆ ಒಳ್ಳೆಯದನ್ನು ಮಾಡುವುದಕ್ಕೋಸ್ಕರ ಇರುವ ದೇವರ ಸೇವಕನಾಗಿರುತ್ತಾನೆ. ಆದರೆ ನೀನು ಕೆಟ್ಟದ್ದನ್ನು ಮಾಡುವವನಾಗಿದ್ದರೆ ಭಯಪಡಬೇಕು. ಏಕೆಂದರೆ ಅವನು ವ್ಯರ್ಥವಾಗಿ ಅಧಿಕಾರವನ್ನು ಪಡೆದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಅಭ್ಯಾಸ ಮಾಡುವವನಿಗೆ ದಂಡನೆಯನ್ನು ವಿಧಿಸುತ್ತಾನೆ. ಆದ್ದರಿಂದ, ಭಯದ ನಿಮಿತ್ತದಿಂದ ಮಾತ್ರವಲ್ಲ ಮನಸ್ಸಾಕ್ಷಿಯ ನಿಮಿತ್ತವೂ ಅಧಿಕಾರಿಗಳಿಗೆ ಅಧೀನನಾಗಿರುವುದು ಅಗತ್ಯವಾಗಿರುತ್ತದೆ.
ಇದರ ನಿಮಿತ್ತವಾಗಿಯೇ ನೀವು ತೆರಿಗೆಯನ್ನು ಪಾವತಿ ಮಾಡುತ್ತೀರಿ. ಏಕೆಂದರೆ, ಅಧಿಕಾರಿಗಳು ಇದರಲ್ಲಿಯೇ ನಿರತರಾಗಿರುವ ದೇವರ ಸೇವಕರಾಗಿರುತ್ತಾರೆ. ನೀವು ಯಾರಿಗೆ ಏನು ಸಲ್ಲಿಸಬೇಕೋ ಅದನ್ನು ಸಲ್ಲಿಸಿರಿ. ತೆರಿಗೆ ಕಟ್ಟಬೇಕಾಗಿದ್ದರೆ ತೆರಿಗೆಯನ್ನು, ಸುಂಕ ಕೊಡಬೇಕಾಗಿದ್ದರೆ ಸುಂಕವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು, ಗೌರವ ಸಲ್ಲಿಸಬೇಕಾಗಿದ್ದರೆ ಗೌರವವನ್ನು ಸಲ್ಲಿಸಿರಿ.
ಪ್ರೀತಿಯು ಮೋಶೆಯ ನಿಯಮವನ್ನು ನೆರವೇರಿಸುವುದು
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ನಿಮಗೆ ಬೇರೆ ಯಾವ ಸಾಲವೂ ಇರಬಾರದು. ಏಕೆಂದರೆ ಮತ್ತೊಬ್ಬರನ್ನು ಪ್ರೀತಿಸುವವನು ಮೋಶೆಯ ನಿಯಮವನ್ನೇ ನೆರವೇರಿಸಿದ್ದಾನೆ. ಏಕೆಂದರೆ, “ವ್ಯಭಿಚಾರ ಮಾಡಬೇಡ, ಕೊಲೆ ಮಾಡಬೇಡ, ಕದಿಯಬೇಡ, ದುರಾಶೆ ಪಡಬೇಡ,”* ಎನ್ನುವ ಹಾಗೂ ಇತರ ಯಾವ ಆಜ್ಞೆಗಳೇ ಇರಲಿ ಅವೆಲ್ಲವೂ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಮಾತಿನಲ್ಲಿವೆ. 10 ಪ್ರೀತಿಯು ತನ್ನ ನೆರೆಯವನಿಗೆ ಹಾನಿ ಮಾಡುವುದಿಲ್ಲ. ಆದ್ದರಿಂದ ಪ್ರೀತಿಯು ನಿಯಮದ ನೆರವೇರಿಕೆಯಾಗಿರುತ್ತದೆ.
ಕಡೆಯದಿನವು ಸಮೀಪವಾಗಿದೆ
11 ಈಗಿನ ಕಾಲವನ್ನು ತಿಳಿದು ಇದನ್ನೆಲ್ಲಾ ಮಾಡಿರಿ. ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಗಳಿಗೆಯಾಗಿದೆ. ಏಕೆಂದರೆ, ನಮ್ಮ ರಕ್ಷಣೆಯು ನಾವು ಮೊದಲು ವಿಶ್ವಾಸವಿಟ್ಟಿದಕ್ಕಿಂತ ಈಗ ಹತ್ತಿರವಾಗಿರುತ್ತದೆ. 12 ರಾತ್ರಿಯು ಬಹಳಷ್ಟು ಕಳೆದು ಹಗಲು ಸಮೀಪಿಸಿದೆ. ಆದ್ದರಿಂದ ನಾವು ಕತ್ತಲೆಯ ಕೃತ್ಯಗಳನ್ನು ಎಸೆದು ಬೆಳಕಿನ ಆಯುಧಗಳನ್ನು ಧರಿಸಿಕೊಳ್ಳೋಣ. 13 ಪಕ್ಷತನ ಕುಡಿಕತನಗಳಲ್ಲಾಗಲಿ, ಕಾಮವಿಲಾಸ ನಿರ್ಲಜ್ಯ ಕೃತ್ಯಗಳಲ್ಲಾಗಲಿ, ಮತ್ಸರಗಳಲ್ಲಾಗಲಿ ನಿರತರಾಗಿರದೆ ಹಗಲಿನಲ್ಲಿರುವವರಂತೆ ಸಭ್ಯತೆಯಿಂದ ನಡೆದುಕೊಳ್ಳೋಣ. 14 ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಧರಿಸಿಕೊಳ್ಳಿರಿ. ದೈಹಿಕ ಆಶೆಗಳನ್ನು ನೆರವೇರಿಸಲು ಯೋಚಿಸಬೇಡಿರಿ.
* 13:9 ವಿಮೋ 20:13-15,17; ಧರ್ಮೋ 5:17-19,21 13:9 ಯಾಜಕ 19:18