14
ಬಲಹೀನರು ಮತ್ತು ಬಲಿಷ್ಠರು
1 ಅಂಥವನ ಅಭಿಪ್ರಾಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ. ವಿಶ್ವಾಸದಲ್ಲಿ ಬಲಹೀನನಾಗಿರುವವನನ್ನು ಸ್ವೀಕರಿಸಿಕೊಳ್ಳಿರಿ.
2 ಒಬ್ಬನ ವಿಶ್ವಾಸವು ಎಲ್ಲವನ್ನೂ ತಿನ್ನುವಂತೆ ಮಾಡುತ್ತದೆ. ಆದರೆ ವಿಶ್ವಾಸದಲ್ಲಿ ಬಲಹೀನನಾಗಿರುವವನು ಸಸ್ಯಾಹಾರಿಯಾಗಿಯೇ ಇರುತ್ತಾನೆ.
3 ಮಾಂಸಾಹಾರಿಯು ಸಸ್ಯಾಹಾರಿಯನ್ನು ಹೀನೈಸದಿರಲಿ. ಸಸ್ಯಾಹಾರಿಯು ಮಾಂಸಾಹಾರಿಯನ್ನು ತೀರ್ಪು ಮಾಡದಿರಲಿ. ಏಕೆಂದರೆ ದೇವರು ಇಬ್ಬರನ್ನು ಸ್ವೀಕಾರ ಮಾಡಿರುತ್ತಾರೆ.
4 ಬೇರೊಬ್ಬನ ಮನೆಗೆಲಸದವನನ್ನು ತೀರ್ಪುಮಾಡಲು ನೀನು ಯಾರು? ಅವನು ನಿಂತರೂ ಬಿದ್ದರೂ ಅದು ಅವನ ಯಜಮಾನನಿಗೆ ಸೇರಿದ್ದು. ಅವನನ್ನು ನಿಲ್ಲುವಂತೆ ಮಾಡಲು ಕರ್ತನು ಶಕ್ತನಾಗಿರುವುದರಿಂದ ಅವನು ಎದ್ದು ನಿಲ್ಲುವನು.
5 ಕೆಲವರು ಒಂದು ದಿನವನ್ನು ಮತ್ತೊಂದು ದಿನಕ್ಕಿಂತ ವಿಶೇಷವೆಂದು ಎಣಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಂತೆ ನಡೆಯಲಿ.
6 ಒಬ್ಬ ಒಂದು ದಿನವನ್ನು ವಿಶೇಷವೆಂದು ಎಣಿಸುವುದಾದರೆ ಅವನು ಅದನ್ನು ಕರ್ತನಿಗಾಗಿಯೇ ಮಾಡಲಿ. ಮಾಂಸಾಹಾರಿಯು ದೇವರಿಗೆ ಕೃತಜ್ಞತೆಯನ್ನು ಮಾಡಿ ಊಟಮಾಡುವುದಾದರೆ ಅವನು ಅದನ್ನು ಮಾಡುವುದು ಕರ್ತನಿಗಾಗಿಯೇ. ಸಸ್ಯಾಹಾರಿಯು ಕರ್ತನಿಗಾಗಿಯೇ ತಿನ್ನದೆ ಕೃತಜ್ಞತೆ ಸಲ್ಲಿಸುತ್ತಾನೆ.
7 ನಮ್ಮಲ್ಲಿ ಯಾರೂ ತಮಗಾಗಿ ಜೀವಿಸದಿರಲಿ, ತಮಗಾಗಿ ಮರಣಿಸುವುದು ಬೇಡ.
8 ಬದುಕಿದರೆ ನಾವು ಕರ್ತನಿಗಾಗಿ ಬದುಕುತ್ತೇವೆ, ಸತ್ತರೆ ಕರ್ತನಿಗಾಗಿ ಸಾಯುತ್ತೇವೆ. ಹೀಗೆ ನಾವು ಬದುಕಿದರೂ ಸತ್ತರೂ ಕರ್ತನಿಗೆ ಸೇರಿದವರಾಗಿರುತ್ತೇವೆ.
9 ಈ ಕಾರಣಕ್ಕಾಗಿಯೇ, ಜೀವಿಸುವವರಿಗೂ ಸತ್ತವರಿಗೂ ಕರ್ತನಾಗಿರಬೇಕೆಂದು ಕ್ರಿಸ್ತನು ಮರಣಹೊಂದಿ ಪುನರುತ್ಥಾನಗೊಂಡರು.
10 ಹೀಗಿರುವಾಗ, ನೀನು ಏಕೆ ನಿನ್ನ ಸಹೋದರರಿಗೆ ತೀರ್ಪುಮಾಡುತ್ತೀ? ಅಥವಾ ನಿನ್ನ ಸಹೋದರರನ್ನು ಏಕೆ ಹೀನಾಯವಾಗಿ ಕಾಣುತ್ತೀ? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲುವೆವು.
11 ಪವಿತ್ರ ವೇದದಲ್ಲಿ ಹೀಗೆ ಬರೆದಿದೆ:
“ ‘ನಾನು ಜೀವಿಸುವುದರಿಂದ,
ಪ್ರತಿಯೊಬ್ಬರೂ ನನ್ನ ಮುಂದೆ ಮೊಣಕಾಲೂರುವರು.
ಪ್ರತಿಯೊಂದು ನಾಲಿಗೆಯೂ ನನ್ನನ್ನು ದೇವರೆಂದು ಅರಿಕೆ ಮಾಡುವುದು,’
ಎಂದು ಕರ್ತನು ಹೇಳುತ್ತಾರೆ.”
12 ಹೀಗಿರುವಾಗ ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕು.
13 ಆದ್ದರಿಂದ ನಾವು ಒಬ್ಬರ ಮೇಲೊಬ್ಬರು ತೀರ್ಪುಮಾಡದಿರೋಣ. ಇದಲ್ಲದೆ ಸಹೋದರರಿಗೆ ಅಡೆತಡೆಯನ್ನಾಗಲಿ, ಅಡ್ಡಿಯನ್ನಾಗಲಿ, ಹಾಕದಿರೋಣ.
14 ಯಾವುದೇ ಪದಾರ್ಥವು ತನ್ನಷ್ಟಕ್ಕೆ ಅಶುದ್ಧವಲ್ಲ ಎಂದು ನಾನು ಕರ್ತ ಆಗಿರುವ ಯೇಸುವಿನಲ್ಲಿ ನಿಶ್ಚಯವಾಗಿ ಬಲ್ಲೆನು. ಆದರೆ ಯಾರಾದರೂ ಅಶುದ್ಧವೆಂದು ಪರಿಗಣಿಸಿದರೆ ಅದು ಅವರಿಗೆ ಅಶುದ್ಧವಾಗಿರುವುದು.
15 ನೀವು ಆಹಾರದಿಂದ ನಿಮ್ಮ ಸಹೋದರರನ್ನು ದುಃಖ ಪಡಿಸುವುದಾದರೆ ನೀವು ಪ್ರೀತಿಯಿಂದ ನಡೆದುಕೊಳ್ಳುವುದಿಲ್ಲ. ನೀವು ತಿನ್ನುವುದರ ಮೂಲಕ ಕ್ರಿಸ್ತನು ಯಾವನಿಗೋಸ್ಕರವಾಗಿ ಸತ್ತರೋ ಅಂಥವರನ್ನು ನಾಶಮಾಡಬೇಡಿರಿ.
16 ನಿಮಗಿರುವ ಒಳ್ಳೆಯದು ಪರರ ದೂಷಣೆಗೆ ಗುರಿಯಾಗದಿರಲಿ.
17 ಏಕೆಂದರೆ ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ. ನೀತಿ, ಸಮಾಧಾನ, ಪವಿತ್ರಾತ್ಮರಲ್ಲಿರುವ ಆನಂದವೂ ಆಗಿದೆ.
18 ಈ ರೀತಿಯಲ್ಲಿ ಕ್ರಿಸ್ತನಿಗೆ ಸೇವೆಮಾಡುವವರು ದೇವರಿಗೆ ಮೆಚ್ಚುಗೆಯಾದವರೂ ಜನರಿಂದ ಅನುಮೋದನೆ ಹೊಂದಿದವರೂ ಆಗಿರುತ್ತಾರೆ.
19 ಆದ್ದರಿಂದ ಯಾವುದು ನಮ್ಮನ್ನು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ನಡೆಸುತ್ತದೋ ಅದನ್ನೇ ಮಾಡೋಣ.
20 ಆಹಾರದ ನಿಮಿತ್ತವಾಗಿ ದೇವರ ಕೆಲಸವನ್ನು ಕೆಡಿಸಬೇಡ, ಎಲ್ಲಾ ಆಹಾರವೂ ಶುದ್ಧವಾದದ್ದೇ. ಆದರೆ ಒಬ್ಬರು ತಿಂದು ವಿಘ್ನವನ್ನು ಒಡ್ಡುವುದು ಕೆಟ್ಟದ್ದು.
21 ಮಾಂಸ ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ ಅಥವಾ ಬೇರೆ ಏನನ್ನೇ ಆಗಲಿ, ಅದು ನಿಮ್ಮ ಸಹೋದರರನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದೆ ಇರುವುದೇ ಒಳ್ಳೆಯದು.
22 ಈ ವಿಷಯದಲ್ಲಿ ನಿಮಗಿರುವ ವೈಯಕ್ತಿಕ ದೃಢವಿಶ್ವಾಸವನ್ನು ನೀವು ದೇವರ ಮುಂದೆ ಇಟ್ಟುಕೊಂಡಿರು. ತಾವು ಅನುಮೋದಿಸಿ ಮಾಡಿದ ಕಾರ್ಯಗಳ ಬಗ್ಗೆ ತಮಗೆ ದಂಡನಾತೀರ್ಪು ಮಾಡಿಕೊಳ್ಳದವರು ಧನ್ಯರು.
23 ಆದರೆ ಅನುಮಾನವುಳ್ಳವರು ಊಟಮಾಡುವುದು ವಿಶ್ವಾಸದಿಂದ ಅಲ್ಲವಾದ್ದರಿಂದ ಅವರು ದೋಷಿಯಾಗುತ್ತಾರೆ. ವಿಶ್ವಾಸವಿಲ್ಲದೆ ಮಾಡುವ ಎಲ್ಲವೂ ಪಾಪವಾಗಿವೆ.